
ಕೋಲಾರ, ೧೬ ಜೂನ್ (ಹಿ.ಸ) :
ಆ್ಯಂಕರ್ : ಸಮಯ ಬೆಳಿಗ್ಗೆ ೧೦.೪೫. ಸರ್ಕಾರಿ ಕಚೇರಿಗಳು ಎಂದಿನ0ತೆ ತೆರೆದಿದ್ದವು. ವಿದ್ಯುತ್ ದೀಪಗಳು ಉರಿಯುತ್ತಿದ್ದವು. ಫ್ಯಾನ್ ಗಾಳಿ ಬೀಸುತ್ತಿತ್ತು. ಖಾಲಿ ಇದ್ದ ಚೇರುಗಳಿಗೆ ಫ್ಯಾನ್ಗಾಳಿ ಸಾಂತ್ವನ ಹೇಳಿದಂತೆ ಇತ್ತು. ಬಹುತೇಕ ಸರ್ಕಾರಿ ಕಚೇರಿಗಳ ದಿನಚರಿ ಆರಂಭವಾಗುವುದೇ ಸಾಹೇಬರು ಕಚೇರಿಗೆ ಬಂದ ನಂತರ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ನಡೆಸಿ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಸಕಾಲದಲ್ಲಿ ಹಾಜರಾಗಿ ಕರ್ತವ್ಯ ಆಪ್ನಲ್ಲಿ ಹಾಜರಾತಿ ಹಾಕುವುದು ಕಡ್ಡಾಯ ಎಂದು ತಾಕೀತು ಮಾಡಿದ್ದರು. ಆದರೆ ಮುಖ್ಯಮಂತ್ರಿಗಳ ಮೌಖಿಕ ಆದೇಶ ಅಧಿಕಾರಿಗಳನ್ನು ತಲುಪಿಲ್ಲ. ಕೋಲಾರ ಜಿಲ್ಲಾಧಿಕಾರಿ ಡಾ. ರವಿ ಅವರು ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೀಪದ ಕೆಳಗೆ ಕತ್ತಲು ಎನ್ನುವಂತೆ ಜಿಲ್ಲಾಡಳಿತ ಭವನದ ಕಚೇರಿಗಳಲ್ಲಿ ಸಮಯ ೧೦.೪೫ ಆದರೂ ಅಧಿಕಾರಿಗಳು ಕಚೇರಿಗೆ ಆಗಮಿಸಲಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಮುತ್ತಲಿನ ಕಚೇರಿಗಳಲ್ಲಿ ಈ ಅವಸ್ಥೆ ಆದರೆ ದೂರದ ಕಚೇರಿಗಳ ಅವಸ್ಥೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ಈ ವೇಳೆ ಕಚೇರಿಗಳಲ್ಲಿನ ಅವ್ಯವಸ್ಥೆ ಹಾಗೂ ಸಿಬ್ಬಂದಿಯ ಗೈರುಹಾಜರಿ ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿಗಳು ಖಾದಿ ಗ್ರಾಮೋದ್ಯೋಗ ಮಂಡಳಿ, ಚುನಾವಣಾ ಶಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಪ್ರವಾಸೋದ್ಯಮ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ. ಕೈಮಗ್ಗ ಮತ್ತು ಜವಳಿ ಇಲಾಖೆ, ಕಾರ್ಮಿಕ ಸೇರಿದಂತೆ ಇತರ ಇಲಾಖೆಗಳ ಪ್ರಮುಖ ವಿಭಾಗಗಳಿಗೆ ದಿಢೀರ್ ಭೇಟಿ ನೀಡಿದರು. ಬೆಳಿಗ್ಗೆ ೧೦:೪೫ ಆದರೂ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡು ಬ0ತು. ಕಚೇರಿಯ ಖಾಲಿ ಕುರ್ಚಿಗಳನ್ನು ಕಂಡ ಡಿಸಿ, ಕರ್ತವ್ಯ ಲೋಪವೆಸಗಿದ ಹಾಗೂ ಅನಧಿಕೃತವಾಗಿ ಗೈರಾದ ಸಿಬ್ಬಂದಿಗೆ ತಕ್ಷಣವೇ 'ಶೋಕಾಸ್ ನೋಟಿಸ್' ಜಾರಿ ಮಾಡುವಂತೆ ಮೇಲಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ನಿಗಮ ಮಂಡಳಿಗಳ ಕಾರ್ಯವೈಖರಿಯನ್ನು ತಪಾಸಣೆ ಮಾಡಿದ ಡಾ. ರವಿ ಅವರು, ರಿಕವರಿ ಅಧಿಕಾರಿಗಳಿಗೆ ನೇರ ಎಚ್ಚರಿಕೆ ರವಾನಿಸಿದರು. ಇದು ಸರ್ಕಾರದ ಯೋಜನೆಗಳೇ ಹೊರತು ಬ್ಯಾಂಕ್ ಯೋಜನೆಗಳಲ್ಲ. ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಹಾಗೂ ಜನಪರವಾಗಿ ಅನುಷ್ಠಾನಗೊಳಿಸಲೇಬೇಕು ಎಂದು ತಾಕೀತು ಮಾಡಿದರು. ಜತೆಗೆ, ಸಾರ್ವಜನಿಕರ ಅನುಕೂಲಕ್ಕಾಗಿ ಜಾಲತಾಣಗಳಲ್ಲಿ ನಿಗಮದ ಮಾಹಿತಿಗಳು ಹಾಗೂ ಯೋಜನೆಗಳ ವಿವರಗಳನ್ನು ತ್ವರಿತವಾಗಿ ಅಪ್ಡೇಟ್ ಮಾಡುವಂತೆ ಸೂಚಿಸಿದರು.
ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಿರುವ ಹಾಗೂ ಲಂಚದ ಬೇಡಿಕೆ ಇಡುತ್ತಿರುವ ಬಗ್ಗೆ ಕೇಳಿ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಆಡಳಿತದಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗುಡುಗಿದರು.
ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ಉದ್ದೇಶದಿಂದ, ಡಿಸಿ ಕಚೇರಿಯ ಮುಂಭಾಗದಲ್ಲಿ 'ಡಿಜಿಟಲ್ ಡಿಸ್ಪ್ಲೇ ಬೋರ್ಡ್' ಅಳವಡಿಸಲು ನಿರ್ದೇಶನ ನೀಡಿದರು. ಈ ನಾಮಫಲಕದಲ್ಲಿ ಕಚೇರಿಯಲ್ಲಿ ಲಭ್ಯವಿರುವ ಸಿಬ್ಬಂದಿಯ ವಿವರ ಹಾಗೂ ಭ್ರಷ್ಟಾಚಾರ ವಿರೋಧಿ ಸಂದೇಶಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಿದರು
ಡಾ. ರವಿ ಅವರ ಈ ದಿಢೀರ್ ಭೇಟಿ ಹಾಗೂ ಕಠಿಣ ನಿಲುವು, ಜಿಲ್ಲೆಯ ಸರ್ಕಾರಿ ವಲಯದಲ್ಲಿ ಸಂಚಲನ ಮೂಡಿಸಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದೆ. ಜಿಲ್ಲಾಧಿಕಾರಿಗಳೊಂದಿಗೆ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮ0ಗಳ ಸೇರಿದಂತೆ ಇನ್ನಿತರ ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್