ಗಡಿಭಾಗದ ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಗದಗ, 16 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಗಡಿಭಾಗದ ಗ್ರಾಮಗಳಾದ ಕೋಗನೂರು, ಗೋವಿನಕೊಪ್ಪ, ಹೆಬ್ಬಾಳ, ಬೆಳಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿ
ಫೋಟೋ


ಗದಗ, 16 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಗಡಿಭಾಗದ ಗ್ರಾಮಗಳಾದ ಕೋಗನೂರು, ಗೋವಿನಕೊಪ್ಪ, ಹೆಬ್ಬಾಳ, ಬೆಳಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಹಟ್ಟಿ ಘಟಕ ವ್ಯವಸ್ಥಾಪಕರಿಗೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.

ಗ್ರಾಮೀಣ ಭಾಗದ ಜನರ ಬಹುಕಾಲದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು, ಕೋಗನೂರು, ಗೋವಿನಕೊಪ್ಪ, ಹೆಬ್ಬಾಳ, ಬೆಳಗಟ್ಟಿ ಸೇರಿದಂತೆ ಗದಗ ಜಿಲ್ಲೆಯ ಗಡಿಭಾಗದ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿನಿತ್ಯ ಶಿಕ್ಷಣ, ಉದ್ಯೋಗ, ವ್ಯಾಪಾರ, ಆರೋಗ್ಯ ಸೇವೆ ಹಾಗೂ ಸರ್ಕಾರಿ ಕಚೇರಿಗಳ ಕೆಲಸಗಳಿಗಾಗಿ ಗದಗ, ಶಿರಹಟ್ಟಿ ಮತ್ತು ರಾಣೆಬೆನ್ನೂರು ನಗರಗಳನ್ನು ಅವಲಂಬಿಸಿದ್ದಾರೆ. ಆದರೆ ಈ ಭಾಗಕ್ಕೆ ಸಮರ್ಪಕ ಬಸ್ ಸೇವೆ ಇಲ್ಲದ ಕಾರಣ ಜನರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಗಮನ ಸೆಳೆದರು.

ವಿದ್ಯಾರ್ಥಿಗಳು ಪ್ರತಿದಿನ ಶಾಲೆ ಮತ್ತು ಕಾಲೇಜುಗಳಿಗೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ ಸಿಗದ ಕಾರಣ ಪಾಠ ಪ್ರವಚನಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವರು ಖಾಸಗಿ ವಾಹನಗಳನ್ನು ಬಳಸಬೇಕಾಗುತ್ತಿದ್ದು, ಇದರಿಂದ ಪೋಷಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಮತ್ತಷ್ಟು ಸಂಕಷ್ಟವನ್ನು ಉಂಟುಮಾಡುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ ತಂಗೋಡದಿಂದ ಹೊರಟು ನೇರವಾಗಿ ವಡವಿ ಹೊಸೂರಿಗೆ ಸಂಚರಿಸುವ ಕೆಲವು ಬಸ್ಗಳ ಮಾರ್ಗದಿಂದ ಕೋಗನೂರು, ಹೆಬ್ಬಾಳ ಹಾಗೂ ಬೆಳಗಟ್ಟಿ ಭಾಗದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈ ಬಸ್ಗಳ ಮಾರ್ಗವನ್ನು ಕೋಗನೂರು–ಹೆಬ್ಬಾಳ–ಬೆಳಗಟ್ಟಿ ಮುಖಾಂತರ ಬದಲಾವಣೆ ಮಾಡಬೇಕು ಎಂದು ಪ್ರಮುಖ ಬೇಡಿಕೆ ಮುಂದಿರಿಸಲಾಗಿದೆ. ಈ ಮಾರ್ಗ ಬದಲಾವಣೆಯಿಂದ ನೂರಾರು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ನೇರ ಸಾರಿಗೆ ಸಂಪರ್ಕ ದೊರೆಯಲಿದ್ದು, ಸಂಚಾರದ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂದು ಕರವೇ ಮುಖಂಡರು ತಿಳಿಸಿದ್ದಾರೆ.

ಇದಲ್ಲದೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ. ಹಲವು ವಿದ್ಯಾರ್ಥಿಗಳು ದೂರದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಮರ್ಪಕ ಬಸ್ ಸೌಲಭ್ಯ ಹಾಗೂ ಪಾಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶೇಷ ಬಸ್ ಸೇವೆ ಹಾಗೂ ಪಾಸ್ ಸೌಲಭ್ಯವನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಆರೋಗ್ಯ ಸೇವೆಗಳ ದೃಷ್ಟಿಯಿಂದಲೂ ಈ ಭಾಗದ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ತೆರಳಲು ಸಾರ್ವಜನಿಕ ಸಾರಿಗೆಯೇ ಪ್ರಮುಖ ಆಧಾರವಾಗಿದ್ದರೂ, ಬಸ್ಗಳ ಕೊರತೆಯಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ರೋಗಿಗಳು ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮೀಣ ಜನರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಗ್ರಾಮೀಣ ಪ್ರದೇಶದ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚುವರಿ ಬಸ್ ಸಂಚಾರ ಆರಂಭಿಸುವುದು, ಈಗಿರುವ ಬಸ್ಗಳ ವೇಳಾಪಟ್ಟಿಯನ್ನು ಪರಿಷ್ಕರಿಸುವುದು, ಮಾರ್ಗ ಬದಲಾವಣೆ ಮಾಡುವುದು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಕರವೇ (ನಾರಾಯಣಗೌಡ ಬಣ) ಮುಖಂಡರು ಒತ್ತಾಯಿಸಿದರು.

ಸಾರ್ವಜನಿಕರ ಈ ನ್ಯಾಯಯುತ ಬೇಡಿಕೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶೀಘ್ರವೇ ಸ್ಪಂದಿಸಿ ಅಗತ್ಯ ಕ್ರಮ ಕೈಗೊಂಡರೆ, ಗಡಿಭಾಗದ ಗ್ರಾಮಗಳ ಸಾವಿರಾರು ಜನರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಗ್ರಾಮೀಣ ಪ್ರದೇಶದ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande