ಸಮನ್ವಯದಿಂದಲೇ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣ : ಕುಲಕರ್ಣಿ
ಗದಗ, 16 ಜೂನ್ (ಹಿ.ಸ.) : ಆ್ಯಂಕರ್ : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ಶೈಕ್ಷಣಿಕ ಸಾಧನೆ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಕರು ಮತ್ತು ಪಾಲಕರ ನಡುವಿನ ಸಮನ್ವಯ ಅತ್ಯಂತ ಅಗತ್ಯವಾಗಿದೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷ ಪ್ರೊ. ರಾಜೇಶ ಕುಲಕರ್ಣಿ ಹೇಳಿದರು. ಗದಗ
ಫೋಟೋ


ಗದಗ, 16 ಜೂನ್ (ಹಿ.ಸ.) :

ಆ್ಯಂಕರ್ : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ಶೈಕ್ಷಣಿಕ ಸಾಧನೆ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಕರು ಮತ್ತು ಪಾಲಕರ ನಡುವಿನ ಸಮನ್ವಯ ಅತ್ಯಂತ ಅಗತ್ಯವಾಗಿದೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷ ಪ್ರೊ. ರಾಜೇಶ ಕುಲಕರ್ಣಿ ಹೇಳಿದರು.

ಗದಗ ನಗರದ ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂಗವಾಗಿ ಆಯೋಜಿಸಿದ್ದ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶಿಕ್ಷಕರು ಮತ್ತು ಪಾಲಕರ ಪಾತ್ರ ಸಮಾನ ಮಹತ್ವದ್ದಾಗಿದೆ ಎಂದು ಹೇಳಿದರು.

ಮಹಾವಿದ್ಯಾಲಯದ ಮೇಲೆ ವಿಶ್ವಾಸವಿಟ್ಟು ತಮ್ಮ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸಂಸ್ಥೆಗೆ ಒಪ್ಪಿಸಿರುವ ಎಲ್ಲ ಪಾಲಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದೆ ಎಂದು ತಿಳಿಸಿದರು. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಮನೋಭಾವ, ಜೀವನ ಮೌಲ್ಯಗಳು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಹೇಳಿದರು.

“ವಿದ್ಯಾರ್ಥಿಯ ಯಶಸ್ಸು ಕೇವಲ ಶಿಕ್ಷಕರ ಜವಾಬ್ದಾರಿಯಲ್ಲ, ಹಾಗೆಯೇ ಅದು ಕೇವಲ ಪಾಲಕರ ಹೊಣೆಗಾರಿಕೆಯೂ ಅಲ್ಲ. ಶಿಕ್ಷಕರು ಮತ್ತು ಪಾಲಕರು ನಿರಂತರ ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳ ಪ್ರಗತಿಯನ್ನು ಗಮನಿಸಿದಾಗ ಮಾತ್ರ ಅವರಲ್ಲಿ ಉತ್ತಮ ಸಾಧನೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಎರಡೂ ಕಡೆಯ ಸಹಕಾರ ಅತ್ಯಗತ್ಯ,” ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಥೆಯ ನಿರ್ದೇಶಕ ಹಾಗೂ ಭೌತಶಾಸ್ತ್ರ ಉಪನ್ಯಾಸಕರಾದ ಪ್ರೊ. ರೋಹಿತ್ ಒಡೆಯರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಜ್ಞಾನದ ಜೊತೆಗೆ ನೈತಿಕ ಮೌಲ್ಯಗಳು, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸುತ್ತಿದ್ದು, ಪಾಲಕರು ಸಹ ಸಂಸ್ಥೆಯೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪುನೀತ್ ದೇಶಪಾಂಡೆ ಸಮಾರೋಪ ಭಾಷಣದಲ್ಲಿ ಮಾತನಾಡಿ, ಸನ್ಮಾರ್ಗ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸನ್ನಡತೆ, ಸಮಯಪ್ರಜ್ಞೆ ಹಾಗೂ ಬೌದ್ಧಿಕ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಸಿಇಟಿ ಹಾಗೂ ನೀಟ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಉದ್ದೇಶದಿಂದ ಮಹಾವಿದ್ಯಾಲಯದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳು, ಮಾದರಿ ಪರೀಕ್ಷೆಗಳು, ತಜ್ಞರಿಂದ ಮಾರ್ಗದರ್ಶನ ಹಾಗೂ ತಂತ್ರಜ್ಞಾನ ಆಧಾರಿತ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹೆಚ್ಚಿಸಲು ಅನುಸರಿಸಲಾಗುತ್ತಿರುವ ವಿವಿಧ ಕಾರ್ಯಕ್ರಮಗಳು, ನೂತನ ಸಾಫ್ಟ್ವೇರ್ಗಳ ಬಳಕೆ, ಅಧ್ಯಯನ ಮೇಲ್ವಿಚಾರಣಾ ವ್ಯವಸ್ಥೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ಪಾಲಕರಿಗೆ ಸಮಗ್ರ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ವರದಿ, ಹಾಜರಾತಿ ಹಾಗೂ ಅವರ ಭವಿಷ್ಯದ ಗುರಿಗಳ ಕುರಿತು ಶಿಕ್ಷಕರು ಪಾಲಕರೊಂದಿಗೆ ಚರ್ಚೆ ನಡೆಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ರಜತ್ ತೇಂಬದಮನಿ, ಕಿರಣ ಹಿರೇಮಠ, ಶಿವರಾಮಚೈತನ್ಯ ಕುಲಕರ್ಣಿ ಹಾಗೂ ಅನನ್ಯ ಜೋಶಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಪಾಲಕರು, ಶಿಕ್ಷಕರು ಹಾಗೂ ಸಹಪಾಠಿಗಳು ಹರ್ಷ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ವೃತ್ತಿ ಮಾರ್ಗದರ್ಶನ ಹಾಗೂ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಪ್ರಶ್ನೆಗಳನ್ನು ಕೇಳಿ ಸಲಹೆ-ಸೂಚನೆಗಳನ್ನು ನೀಡಿದರು. ಶಿಕ್ಷಕರು ಪಾಲಕರ ಪ್ರಶ್ನೆಗಳಿಗೆ ಉತ್ತರಿಸಿ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಬಿ.ಜಿ. ಹಿರೇಮಠ, ನಿರ್ದೇಶಕರಾದ ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ರಾಹುಲ್ ಒಡೆಯರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.

ಪ್ರೊ. ಮುರಳೀಧರ ಸಂಕನೂರ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಪ್ರೊ. ಪರಶುರಾಮ ಕೊಟ್ಟಿಕಲ್ ವಂದಿಸಿದರು.

ಪಾಲಕರ ಸಭೆಯು ಶಿಕ್ಷಕರು ಮತ್ತು ಪಾಲಕರ ನಡುವೆ ಉತ್ತಮ ಸಂವಹನಕ್ಕೆ ವೇದಿಕೆಯಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾದ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆ ಮತ್ತು ಪಾಲಕರು ಪರಸ್ಪರ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಬೇಕೆಂಬ ಸಂದೇಶದೊಂದಿಗೆ ಸಭೆ ಯಶಸ್ವಿಯಾಗಿ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande