
ವಿಜಯಪುರ, 16 ಜೂನ್ (ಹಿ.ಸ.) :
ಆಂಕರ್ : ಸಾಕುಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಮಾರಣಾಂತಿಕ ರೇಬಿಸ್ ರೋಗದ ತಡೆಗಟ್ಟುವ ನಿಟ್ಟಿನಲ್ಲಿ ನಗರದ ಬಿಜಾಪುರ ಪೆಟ್ ಮಾರ್ಟ್ ವತಿಯಿಂದ “ರೇಬಿಸ್ ಮುಕ್ತ ವಿಜಯಪುರ” ಅಭಿಯಾನದ ಅಂಗವಾಗಿ ವಿಶೇಷ ವ್ಯಾಕ್ಸಿನ್ ಕ್ಯಾಂಪ್ ಆಯೋಜಿಸಲಾಯಿತು. ಶಿಬಿರದಲ್ಲಿ ನೂರಾರು ಸಾಕು ನಾಯಿಗಳು ಸೇರಿದಂತೆ ವಿವಿಧ ಪ್ರಾಣಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಯಿತು.
ನಗರದ ಸಾಕುಪ್ರಾಣಿ ಪ್ರಿಯರು, ಪ್ರಾಣಿ ಪಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸಿಕೊಂಡರು. ರೇಬಿಸ್ ರೋಗವು ಪ್ರಾಣಿಗಳಿಂದ ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬ ಸಾಕುಪ್ರಾಣಿ ಮಾಲೀಕರು ತಮ್ಮ ಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸುವ ಅಗತ್ಯವಿದೆ ಎಂದು ತಜ್ಞರು ತಿಳಿಸಿದರು.
ಬಿಜಾಪುರ ಪೆಟ್ ಮಾರ್ಟ್ನ ಈ ಸಾಮಾಜಿಕ ಕಾಳಜಿಯ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾಕುಪ್ರಾಣಿಗಳ ಆರೋಗ್ಯ ರಕ್ಷಣೆ ಜೊತೆಗೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಇಂತಹ ಶಿಬಿರಗಳು ಮಹತ್ವದ್ದಾಗಿವೆ ಎಂದು ಆಯೋಜಕರು ಹೇಳಿದರು.
ರೇಬಿಸ್ ನಿಯಂತ್ರಣಕ್ಕೆ ಲಸಿಕೆ ಪ್ರಮುಖ ಅಸ್ತ್ರವಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗದ ಸಾಕುಪ್ರಾಣಿ ಪಾಲಕರು ತಮ್ಮ ಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸುವ ಮೂಲಕ ರೋಗ ಹರಡುವಿಕೆಯನ್ನು ತಡೆಯಬೇಕು ಎಂದು ಮನವಿ ಮಾಡಲಾಯಿತು.
ಪ್ರಾಣಿಗಳ ಮೇಲಿನ ಕಾಳಜಿ, ಸಾರ್ವಜನಿಕ ಆರೋಗ್ಯದ ರಕ್ಷಣೆ ಮತ್ತು ರೇಬಿಸ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ಇಂತಹ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಜಾಪುರ ಪೆಟ್ ಮಾರ್ಟ್ ಪ್ರತಿನಿಧಿಗಳು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande