
ವಿಜಯಪುರ, 16 ಜೂನ್ (ಹಿ.ಸ.) :
ಆಂಕರ್ : ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ 22 ಲಂಬಾಣಿ ತಾಂಡಾಗಳ ಮುಖ್ಯಸ್ಥರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಜಾರ ಸಮಾಜದ ಗುರುಗಳಾದ ಸೋಮಲಿಂಗ ಮಹಾರಾಜ ಕೆಸರಟ್ಟಿ ಅವರು ಸಮಾಜದ ಜನರಿಗೆ ವರದಕ್ಷಿಣೆ ಸ್ವೀಕರಿಸದಂತೆ ಹಾಗೂ ಮದುವೆ, ಜಾತ್ರೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಡೆಯುವ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಕರೆ ನೀಡಿದರು.
ವರದಕ್ಷಿಣೆ ಪದ್ಧತಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಹೊರೆ ಉಂಟುಮಾಡುತ್ತಿದ್ದು, ಹೆಣ್ಣು ಮಕ್ಕಳ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಅನಿಷ್ಠ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ತಾಂಡಾ ನಾಯಕರರು ಹಾಗೂ ಸಾರ್ವಜನಿಕರು ಭಾಗವಹಿಸಿ “ವರದಕ್ಷಿಣೆ ಪಡೆಯುವುದಿಲ್ಲ, ನೀಡುವುದಿಲ್ಲ; ಮದುವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನಗತ್ಯ ಖರ್ಚು ಮಾಡುವುದಿಲ್ಲ” ಎಂಬ ಪ್ರತಿಜ್ಞೆ ಸ್ವೀಕರಿಸಿದರು.
ಬಂಜಾರ ಸಮಾಜದಲ್ಲಿ ಶಿಕ್ಷಣ, ಸರಳ ವಿವಾಹ ಪದ್ಧತಿ ಹಾಗೂ ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು. ಕಾರ್ಯಕ್ರಮವು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಯಿತು
ಹಿಂದೂಸ್ತಾನ್ ಸಮಾಚಾರ್ / jyothi deshpande