
ಬಳ್ಳಾರಿ, 16 ಜೂನ್ (ಹಿ.ಸ.) :
ಆ್ಯಂಕರ್ : ಮರಿಯಮ್ಮನಹಳ್ಳಿ ಸಮೀಪದ ಡಾಣಾಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ-50ರ ಸರ್ವೀಸ್ ರಸ್ತೆಯ ಕಳಪೆ ಕಾಮಗಾರಿಯನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸಿದ ಯುವಕ ಮತ್ತು ಆತನ ಪೋಷಕರನ್ನು ಹಾಳಾದ ರಸ್ತೆಯ ಸ್ಥಳಕ್ಕೆ ಕರೆಯಿಸಿಕೊಂಡ ಸಂಸದ ಈ. ತುಕಾರಾಂ ಅವರು `ಅಶ್ಲೀಲ ಪದ' ಬಳಕೆ ಮಾಡಿ, ಕ್ಷಮೆ ಕೇಳಿಸಿ, ಬೆದರಿಕೆ ಹಾಕಿರುವುದನ್ನು ಖಂಡಿಸಿ ಬಳ್ಳಾರಿಯಲ್ಲಿ ಜಿಲ್ಲಾ ಬಿಜೆಪಿ ಮಂಗಳವಾರ ಪ್ರತಿಭಟನೆ ನಡೆಸಿ, ಸಂಸದರ ಪ್ರತಿಕೃತಿಯನ್ನು ದಹನ ಮಾಡಿತು.
ಡಾಣಾಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ-50ರ ಸರ್ವೀಸ್ ರಸ್ತೆಯನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗುತ್ತಿಗೆ ಷರತ್ತಿನ ಮಾನದಂಡಗಳನ್ನು ಪಾಲಿಸದೇ, ಕಳಪೆ ವಸ್ತುಗಳನ್ನು (ಫ್ಲೈಯಾಶ್) ಬಳಕೆ ಮಾಡಿ ರಸ್ತೆ ನಿರ್ಮಿಸಲಾಗುತ್ತಿದೆ. ಕಾರಣ ಮಳೆ ಬಂದ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಟ್ರಕ್ ರಸ್ತೆಯಲ್ಲಿ ಸಿಕ್ಕಿಕೊಂಡಿದೆ ಎಂದು ಯುವಕ ರಮೇಶ್ ವೀಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸಿದ್ದನು. ಸ್ಥಳೀಯರು ರಸ್ತೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರಿಂದ ಆಕ್ರೋಶಗೊಂಡ ಸಂಸದ ಈ. ತುಕಾರಾಂ ಅವರು, ಸೋಮವಾರ ಸ್ಥಳಕ್ಕೆ ಭೇಟಿ ನೀಡಿದಾಗ, ವೀಡಿಯೋ ಚಿತ್ರೀಕರಿಸಿದ್ದ ರಮೇಶ್ ಮತ್ತು ಆತನ ಪೋಷಕರನ್ನು ಪೊಲೀಸರ ಮೂಲಕ ಕರೆಯಿಸಿ, ಕ್ಷಮೆ ಕೇಳಿಸಿ, ಅಶ್ಲೀಲ ಪದಗಳಿಂದ ಹೀಯಾಳಿಸಿದ್ದಾರೆ ಎಂದು ಹೇಳಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ಮೋಕ ಅವರು, ಸಂಸದರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್