
ಬೆಂಗಳೂರು, 16 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ಸಂಭವನೀಯ ಬರ ಪರಿಸ್ಥಿತಿಯನ್ನು ಎದುರಿಸುವ ಕುರಿತು ಸರ್ಕಾರ ಸಜ್ಜಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಇನ್ನೂ ಶೇ.30 ರಷ್ಟು ಮಳೆಯೂ ಆಗಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿರುವ ಸಂದರ್ಭದಲ್ಲಿ ಕೇವಲ ಸಭೆಗಳನ್ನು ನಡೆಸುವುದು ಅಥವಾ ಮಾಧ್ಯಮಗಳಿಗೆ ಹೇಳಿಕೆ ನೀಡುವುದರಿಂದ ಬರ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಟೀಕಿಸಿದ್ದಾರೆ.
ಬರಗಾಲವನ್ನು ಸಮರ್ಥವಾಗಿ ಎದುರಿಸಲು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳದಲ್ಲಿದ್ದು ರೈತರ ಮತ್ತು ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಬೇಕು. ಬರಪೀಡಿತ ಪ್ರದೇಶಗಳಲ್ಲಿ ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವಾಗ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದೊಳಗಿನ ಅಸಮಾಧಾನ ಹಾಗೂ ಸಂಪುಟ ವಿಸ್ತರಣೆ ವಿಳಂಬವನ್ನು ಉಲ್ಲೇಖಿಸಿದ ಅಶೋಕ್, ಪೂರ್ಣ ಪ್ರಮಾಣದ ಸಚಿವ ಸಂಪುಟವಿಲ್ಲದೆ ಬರ ನಿರ್ವಹಣೆ ಸಾಧ್ಯವೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಸರ್ಕಾರ ತಕ್ಷಣ ಸಂಪುಟ ವಿಸ್ತರಣೆ ನಡೆಸಿ, ಸಚಿವರನ್ನು ಗ್ರಾಮ ಮಟ್ಟದಲ್ಲಿ ಪರಿಹಾರ ಕಾರ್ಯಗಳಿಗೆ ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲವಾದರೆ ರಾಜ್ಯದ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಅಶೋಕ್, ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ಬದಲು ಸರ್ಕಾರ ಪರಿಣಾಮಕಾರಿ ಕ್ರಮಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.