
ಕೋಲಾರ, ೧೫ ಜೂನ್ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲೆಯ ತರಕಾರಿಗಳು ವಿಷಯುಕ್ತವಾದೆ. ಇದಕ್ಕೆ ಕಾರಣ ಹೆಚ್ಚು ಹೆಚ್ಚು ರಸಾಯನಿಕ ಗೊಬ್ಬರ ಬಳಕೆಯಾಗಿದೆ. ಮಣ್ಣು, ನೀರು, ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿದರೆ ಸಾಲದು ಅದರ ಪಾಲನೆ ಮಾಡಬೇಕು ಒಂದು ಬೆಳೆಯ ಜೊತೆಯಲ್ಲಿ ನಾಲ್ಕೈದು ರೀತಿಯ ಬೆಳೆಗಳನ್ನು ಬೆಳೆಯಬೇಕು ಸಾಧ್ಯವಾದಷ್ಟು ರಸಾಯನಿಕ ಗೊಬ್ಬರಗಳನ್ನು ದೂರ ಮಾಡಿ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಡಾ.ಎಂ.ಅ0ಜಿನಪ್ಪ ತಿಳಿಸಿದರು.
ನಗರದ ಹೊರವಲಯದ ಟಮಕದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಸೋಮವಾರ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಭೂಮಿಯ ಫಲವತ್ತತೆಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಾಸಾಯನಿಕ ಮುಕ್ತ ಕೃಷಿಯ ಕಡೆಗೆ ಗಮನ ಹರಿಸಬೇಕಾಗಿದೆ. ರಾಜ್ಯ ಸರ್ಕಾರವು ನೈಸರ್ಗಿಕ, ಸಾವಯವ ಕೃಷಿಯ ಜಾಗೃತಿ ಹಾಗೂ ಪ್ರೋತ್ಸಾಹಕ್ಕೆ ವಿಶೇಷವಾದ ಕ್ರಮಗಳನ್ನು ಕೈಗೊಳ್ಳಲಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಈ ಸಂಬAಧ ಪ್ರಯೋಗಗಳನ್ನು ಹೆಚ್ಚಿಸಿವೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ರೈತರು ಬೆಳೆ ಪರಿವರ್ತನೆಯ ಜೊತೆಗೆ ಮಣ್ಣು ಸಹ ಪರಿವರ್ತನೆಗೆ ಒತ್ತು ನೀಡಬೇಕು. ಕೃಷಿ ಜಮೀನನ್ನು ರಾಸಾಯನಿಕ ಮುಕ್ತವಾಗಿ ಪರಿವರ್ತಿಸಲು ಜಾಗೃತಿ ಮೂಡಿಸುವ ಮತ್ತು ಮಾರ್ಗದರ್ಶನ ಪಡೆಯಬೇಕು. ರಸಾಯನಿಕ ಗೊಬ್ಬರ ದೂರವಿಟ್ಟು ಸಾವಯವ ಪದ್ದತಿಗೆ ಒತ್ತು ನೀಡಬೇಕಾಗಿದೆ
ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕೊಮ್ಮನಹಳ್ಳಿ ಆನಂದ್ ಮಾತನಾಡಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಹತ್ವಾಕಾಂಕ್ಷಿ ಖೇತ್ ಬಚಾವ್ ಕೃಷಿ ಜಾಗೃತಿ ಅಭಿಯಾನದ ಅಂಗವಾಗಿ ರೈತರಲ್ಲಿ ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸಲಾಗುತ್ತಿದೆ. ಹಾಗಾಗಿ ನೈಸರ್ಗಿಕ ಕೃಷಿಯನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು
ತರಬೇತಿಯಲ್ಲಿ ವಿವಿಧ ಕೃಷಿ ಪಂಡಿತರು ವಿಜ್ಞಾನಿಗಳು, ಕೃಷಿಕರಿಗೆ ನೈಸರ್ಗಿಕ ಕೃಷಿ ಮಹತ್ವ, ತತ್ವಗಳು, ಮಣ್ಣಿನ ಮಹತ್ವ, ಮಣ್ಣಿನ ಪೋಷಕಾಂಶಗಳ ನಿರ್ವಹಣೆಗಾಗಿ ಜೀವಾಮೃತ ಬಳಕೆ, ಹೊದಿಕೆಯ ಮಹತ್ವ, ಜೈವಿಕಗೊಬ್ಬರಗಳ ಬಳಕೆ, ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ, ನೀರಿನ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ, ಬೀಜ ಮತ್ತು ಸಸಿಗಳ ನಿರ್ವಹಣೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಶಿವಾನಂದ ಹೊಂಗಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಮಾವು ಮಂಡಳಿ ಅಧ್ಯಕ್ಷ ವಾಸುದೇವ್ ರಾವ್, ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಸಸ್ಯ ಸಂರಕ್ಷಣಾಧಿಕಾರಿ ಡಾ.ಜಯಸಿಂಹ, ತೋಟಗಾರಿಕೆ ವಿವಿ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ನಾಚೇಗೌಡ, ಬಿಜೆಪಿ ರೈತ ಮೋರ್ಚಾ ಮುಖಂಡರಾದ ಲಕ್ಷ್ಮಣಗೌಡ, ಬಿಜೆಪಿ ಶಿವಣ್ಣ, ಗೋಪಸಂದ್ರ ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್