ರೈತರಿಂದ ಹೆಚ್ಚು ವಸೂಲಿ ಮಾಡಿದರೆ ಕಠಿಣ ಕ್ರಮ
ಗದಗ, 15 ಜೂನ್ (ಹಿ.ಸ.) : ಆ್ಯಂಕರ್ : ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ರಸಗೊಬ್ಬರಗಳ ಖರೀದಿ ಕುರಿತು ಅಗತ್ಯ ಮಾಹಿತಿಯನ್ನು ಕೃಷಿ ಇಲಾಖೆ ನೀಡಿದ್ದು, ನಿಗದಿತ ಗರಿಷ್ಠ ಚಿಲ್ಲರೆ ಮಾರಾಟ ದರ (ಎಂಆರ್ಪಿ) ಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್
ಫೋಟೋ


ಗದಗ, 15 ಜೂನ್ (ಹಿ.ಸ.) :

ಆ್ಯಂಕರ್ : ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ರಸಗೊಬ್ಬರಗಳ ಖರೀದಿ ಕುರಿತು ಅಗತ್ಯ ಮಾಹಿತಿಯನ್ನು ಕೃಷಿ ಇಲಾಖೆ ನೀಡಿದ್ದು, ನಿಗದಿತ ಗರಿಷ್ಠ ಚಿಲ್ಲರೆ ಮಾರಾಟ ದರ (ಎಂಆರ್ಪಿ) ಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರವು ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್ಬಿಎಸ್) ದರಗಳನ್ನು ನಿಗದಿಪಡಿಸಿದ್ದು, ರೈತರಿಗೆ ಸಮರ್ಪಕ ದರದಲ್ಲಿ ರಸಗೊಬ್ಬರಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರಗಳ ಮಾರಾಟದಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಹೆಚ್ಚುವರಿ ಬೆಲೆ ವಸೂಲಾತಿ ನಡೆಯದಂತೆ ಕೃಷಿ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ರೈತರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಡಿಎಪಿ ಸೇರಿದಂತೆ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಮುಂದುವರಿಸಿದೆ. ಇದರಿಂದ ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರಗಳು ಲಭ್ಯವಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಇಲಾಖೆ ತಿಳಿಸಿದೆ.

ಇದೇ ವೇಳೆ ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟಗಾರರು ಹಾಗೂ ಸಹಕಾರ ಸಂಘಗಳಿಗೆ ಸರ್ಕಾರ ನಿಗದಿಪಡಿಸಿರುವ ದರಗಳನ್ನೇ ಪಾಲಿಸುವಂತೆ ಸೂಚನೆ ನೀಡಲಾಗಿದೆ. ನಿಗದಿತ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿದರೆ ರಸಗೊಬ್ಬರ ನಿಯಂತ್ರಣ ಆದೇಶ ಮತ್ತು ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಾಂಪ್ರದಾಯಿಕ ಹರಳು ರೂಪದ ರಸಗೊಬ್ಬರಗಳ ಜೊತೆಗೆ ನ್ಯಾನೋ ತಂತ್ರಜ್ಞಾನ ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಕೃಷಿ ಇಲಾಖೆ ರೈತರಿಗೆ ಕರೆ ನೀಡಿದೆ. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆಯಿಂದ ಪೋಷಕಾಂಶಗಳ ಪರಿಣಾಮಕಾರಿ ಬಳಕೆ ಸಾಧ್ಯವಾಗುವುದಲ್ಲದೆ, ಮಣ್ಣಿನ ಆರೋಗ್ಯ ಕಾಪಾಡಲು ಸಹ ಸಹಕಾರಿಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೈತರು ರಸಗೊಬ್ಬರ ಖರೀದಿಸುವ ಸಂದರ್ಭದಲ್ಲಿ ಅಧಿಕೃತ ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿ ಮಾಡಬೇಕು. ಖರೀದಿಸಿದ ಪ್ರತಿಯೊಂದು ರಸಗೊಬ್ಬರಕ್ಕೂ ಕಡ್ಡಾಯವಾಗಿ ಬಿಲ್ ಪಡೆಯಬೇಕು. ಜೊತೆಗೆ ಚೀಲದ ಮೇಲಿರುವ ಗರಿಷ್ಠ ಮಾರಾಟ ದರವನ್ನು ಪರಿಶೀಲಿಸಿ ನಂತರವೇ ಖರೀದಿ ನಡೆಸಬೇಕು ಎಂದು ಇಲಾಖೆ ಸಲಹೆ ನೀಡಿದೆ.

ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಬೇಡಿಕೆಯ ನೆಪದಲ್ಲಿ ಕೆಲವರು ಹೆಚ್ಚುವರಿ ಬೆಲೆ ವಸೂಲಿ ಮಾಡುವ ಸಾಧ್ಯತೆ ಇರುವುದರಿಂದ ರೈತರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಅಕ್ರಮ, ದಾಸ್ತಾನು ಕೊರತೆ ಅಥವಾ ಅಧಿಕ ಬೆಲೆ ವಸೂಲಾತಿ ಕಂಡುಬಂದಲ್ಲಿ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

ಜಿಲ್ಲೆಯ ರೈತರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಅಧಿಕೃತ ಮಾರಾಟ ಕೇಂದ್ರಗಳಿಂದಲೇ ರಸಗೊಬ್ಬರ ಖರೀದಿಸುವ ಮೂಲಕ ಯಾವುದೇ ವಂಚನೆಗೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande