
ಬಾಗಲಕೋಟೆ, 15 ಜೂನ್ (ಹಿ.ಸ.) :
ಆಂಕರ್ : ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧಿ ಪಡೆದಿರುವ ಬಾದಾಮಿ ಬನಶಂಕರಿದೇವಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸಿರುವ 106 ಕೆಜಿ ಶುದ್ಧ ಬೆಳ್ಳಿ ಲೇಪನ ಹೊಂದಿರುವ ವೈಭವದ ಬೆಳ್ಳಿರಥವನ್ನು ಜೂನ್ 17ರಂದು ಬುಧವಾರ ಸಮರ್ಪಣೆ ಮಾಡಲಾಗುತ್ತಿದೆ ಎಂದು ಶ್ರೀ ಬನಶಂಕರಿದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ವೆಂಕಟೇಶ ಪೂಜಾರ ತಿಳಿಸಿದ್ದಾರೆ.
ಪಟ್ಟಣದ ಸಮೀಪದ ಬನಶಂಕರಿದೇವಸ್ಥಾನ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತರು ಹಾಗೂ ಅರ್ಚಕರ ಬಹುದಿನಗಳ ಆಶಯದಂತೆ ಭಕ್ತರ ಸಹಕಾರ, ಪ್ರೇರಣೆ ಮತ್ತು ದೇಣಿಗೆಯಿಂದ ಈ ಮಹತ್ವದ ಕಾರ್ಯ ನೆರವೇರಿದೆ ಎಂದು ಹೇಳಿದರು.
ಒಂದು ವರ್ಷದ ಅವಧಿಯಲ್ಲಿ ನೂತನ ಬೆಳ್ಳಿ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ನಿಪ್ಪಾಣಿಯ ಸುರೇಶ ಶೆಟ್ಟಿ ಅವರು ರಥ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕುಮಟಾದಲ್ಲಿ ಸಾಗುವಾನಿ ಮರದಿಂದ ನಿರ್ಮಿಸಿದ ರಥಕ್ಕೆ 106 ಕೆಜಿ ಶುದ್ಧ ಬೆಳ್ಳಿಯ ಲೇಪನ ಮಾಡಲಾಗಿದೆ. ಸುಮಾರು ₹15 ಲಕ್ಷಕ್ಕೂ ಅಧಿಕ ಮೊತ್ತದ ತಯಾರಿಕಾ ಮಜೂರಿ ನೀಡಿ ರಥವನ್ನು ಸಿದ್ಧಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಸುಮಾರು ₹5 ರಿಂದ ₹6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಬೆಳ್ಳಿರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಗುವುದು. ರಥದಲ್ಲಿ ಸಿಂಹದ ಲಾಂಛನ ಹಾಗೂ ಅಷ್ಟಲಕ್ಷ್ಮಿಯರ ಸುಂದರ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ. ವಿವಿಧ ರಾಜ್ಯಗಳ ಸುಮಾರು 25 ಮಂದಿ ಅಕ್ಕಸಾಲಿಗರು ಸುಮಾರು ಆರು ತಿಂಗಳ ಕಾಲ ಶ್ರಮವಹಿಸಿ ಬೆಳ್ಳಿ ರಥ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.
ಜೂನ್ 16ರಂದು ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಜೂನ್ 17ರಂದು ಬುಧವಾರ ಬೆಳಿಗ್ಗೆ 10 ಗಂಟೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ನಂತರ ಮಧ್ಯಾಹ್ನ 12.45ಕ್ಕೆ ದೇವಿಯ ನೂತನ ಬೆಳ್ಳಿರಥ ಸಮರ್ಪಣೆಯ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವೆಂಕಟೇಶ ಪೂಜಾರ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪೂಜಾರ ಮನೆತನದ ಕುಟುಂಬಸ್ಥರಾದ ಮಹೇಶ, ಮಹಾಂತೇಶ, ವಿದ್ಯಾನಂದ, ಶಂಕರ, ಲಕ್ಷ್ಮಣ, ಚಿದಂಬರ, ಕಿರಣ, ರಮೇಶ, ಶ್ರೀನಿವಾಸ, ಶ್ರೀರಂಗ, ಉದಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande