
ಬೆಂಗಳೂರು, 15 ಜೂನ್ (ಹಿ.ಸ.) :
ಆ್ಯಂಕರ್ : ಖಾಸಗಿ ವಿದ್ಯುತ್ ಸರಬರಾಜಿಗಾಗಿ ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟವು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ)ವನ್ನು ಒತ್ತಾಯಿಸಿದೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ರೈತ ಮುಖಂಡರ ನಿಯೋಗವು ಸೋಮವಾರ ಕೆಇಆರ್ಸಿ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ರವಿಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿದ ಆಯೋಗದ ಅಧ್ಯಕ್ಷ ರವಿಕುಮಾರ್, ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿರುವ ಅಂತಿಮ ದಿನಾಂಕ ಜೂನ್ 23 ಮುಗಿದ ಬಳಿಕ ಅರ್ಜಿದಾರರು ಹಾಗೂ ವಿರೋಧ ವ್ಯಕ್ತಪಡಿಸಿರುವವರ ಅಭಿಪ್ರಾಯಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಬಳಿಕ ವಿಷಯದ ಸಾಧಕ-ಬಾಧಕಗಳನ್ನು ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ರೈತ ಮುಖಂಡರ ನಿಯೋಗದಲ್ಲಿ ಹತ್ತಳ್ಳಿ ದೇವರಾಜ್, ಬರ್ಡನಪುರ ನಾಗರಾಜ್, ಹೆಗೂರು ರಂಗರಾಜ್, ಮಿಲಿಟರಿ ಕುಮಾರ್, ಮೇಘಲಕೊಪ್ಪಲು ಕುಮಾರ್, ಚಿಕ್ಕಬಳ್ಳಾಪುರ ಶ್ರೀನಿವಾಸ ರೆಡ್ಡಿ, ಬೈರಾರೆಡ್ಡಿ, ಶಾಂತಮ್ಮ, ಉಮಾದೇವಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.