ಶಾಲಾ ಸವಿ ನೆನಪುಗಳನ್ನು ನೆನಪು ಹಾಕಿದ ಎಸ್.ಡಿ.ಎ. ಶಾಲೆಯ ವಿದ್ಯಾರ್ಥಿಗಳು
ಶಾಲಾ ಸವಿ ನೆನಪುಗಳನ್ನು ನೆನಪು ಹಾಕಿದ ಎಸ್.ಡಿ.ಎ. ಶಾಲೆಯ ವಿದ್ಯಾರ್ಥಿಗಳು
ಕೋಲಾರ ನಗರದ ಎಸ್.ಡಿ.ಎ. ಶಾಲೆಯ ಹಳೆಯ ವಿದ್ಯಾರ್ಥಿಗಳ ಸಮಾಗಮ ನಡೆಯಿತು.


ಕೋಲಾರ,೧೫ ಜೂನ್ (ಹಿ.ಸ) :

ಆ್ಯಂಕರ್ : ಅದೊಂದು ಅಪೂರ್ವ ಸಂಗಮದ ಕ್ಷಣವಾಗಿ ೩೦ ವರ್ಷಗಳ ನಂತರ ಹಳೆಯ ವಿದ್ಯಾರ್ಥಿಗಳ ಬಳಗದ ಸಮ್ಮಿಲನವಾಗಿ ಅಂದಿನ ಬಾಲ್ಯ ಜೀವನದ ಸವಿನೆನಪುಗಳನ್ನು ಮೆಲಕು ಹಾಕುವ ಕಾರ್ಯಕ್ರಮವಾಗಿ ರೂಪಗೊಂಡಿತ್ತು. ನಗರದ ಕನಕನ ಪಾಳ್ಯದಲ್ಲಿ ಒಂದು ಕಾಲದಲ್ಲಿ ವೈಭವ ಮೆರೆದಿದ್ದ ಎಸ್.ಡಿ.ಎ (ಸೆವೆಂತ್ ಡೇ ಅಡ್ವೆಂರ್ಸ್ ಆಂಗ್ಲ ಪ್ರೌಢ ಶಾಲೆ) ೧೯೯೭-೯೮ ನೇ ಸಾಲಿನ ಹಳೆಯ ವಿದ್ಯಾರ್ಥಿಗಳು, ಒಂದೆಡೆ ಬೆರೆಯುವ ಕಾತುರದ ಹಾಗೂ ಭಾವುಕದ ಕ್ಷಣವಾಗಿದ್ದು ನಗರ ಹೊರವಲಯದ ಸುಂದರ ಅಚ್ಚಹಸಿರಿನ ಪರಿಸರದ ನಡುವೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿಡುವಿಲ್ಲದ ಬದುಕಿನ ಜಂಜಾಟದ ನಡುವೆಯೂ ಸುಮಾರು ೩೫ ಮಂದಿ ಜಮಾಯಿಸಿದ್ದು ಅದರಲ್ಲಿ ರೈತರಾದಿಯಾಗಿ, ಮಹಿಳೆಯರು ಹಾಗೂ ವಿವಿಧ ಕ್ಷೇತ್ರಗಳಾದ ಸರ್ಕಾರಿ, ಖಾಸಗಿ, ಉದ್ದಿಮೆ ಹಾಗೂ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದವರು ಅಲ್ಲಿ ನೆರೆದಿದ್ದರು.

ಕೋಲಾರ ತಾಲ್ಲೂಕಿನ ನಡುಪಳ್ಳಿ ಗ್ರಾಮದ ಮಾಜಿ ಸೈನಿಕ ವಿ.ಶ್ರೀನಾಥ್, ದಿಂಬಚಾಮನಹಳ್ಳಿ ಬೈಚೇಗೌಡ ಹಾಗೂ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಲೋಕೇಶ್ ಅವರು, ಬಹುದಿನಗಳಿಂದ ಸಂಘಟಿಸಿದ್ದ ಈ ಕಾರ್ಯಕ್ರಮದಲ್ಲಿ ೩೦ ವರ್ಷಗಳ ಹಿಂದಿನ ಸವಿ-ಸವಿ ನೆನಪುಗಳನ್ನು ಹಾಗೂ ಘಟನೆಗಳನ್ನು ಮೆಲುಕು ಹಾಕಲಾಯಿತು. ಕೋಲಾರದ ಎಸ್.ಡಿ.ಎ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮಾಡಿ ಅಲ್ಲಿಂದ ಚದುರಿದ್ದವರು ಪಿ.ಯು.ಸಿ. ಹಾಗೂ ಪದವಿ ವಿದ್ಯಾಭ್ಯಾಸವನ್ನು ಬೇರೆಡೆ ಪೂರೈಸಿ, ಉದ್ಯೋಗದಾತರಾಗಿ ನಂತರ ವಿವಾಹಿತರಾಗಿ ನಂತರ ಮಕ್ಕಳ ಪೋಷಕರಾಗಿ ರಾಜ್ಯದ ವಿವಿದೆಡೆ ಜೀವನ ಹಾಗೂ ಉದ್ಯೋಗ ನಿಮಿತ್ತವಾಗಿ ಬೇರೆ ಎಲ್ಲೆಲ್ಲೋ ಹಂಚಿಹೋಗಿದ್ದರು.

ಇಲ್ಲಿಗೆ ಆಗಮಿಸಿದ ಹಳೆಯ ಗೆಳೆಯರು ಬಂದವರೇ ಹೇ...ಲೋ.. ಬ್ರೋ..ಮಗ ಮಚ್ಚಾ ಮತ್ತಿನ್ನೇನೋ ಅನ್ನುತ್ತಾ ಅವರ ಅಡ್ಡಹೆಸರುಗಳನ್ನು ನೆನಪಿಕೊಂಡು ಕರೆಯುತ್ತಾ, ಕೀಚಾಯಿಸುತ್ತಾ, ಒಬ್ಬರನ್ನೊಬ್ಬರು ಕೈ ಕುಲುಕಿ, ಅಪ್ಪಿಕೊಂಡು ನಡೆಸಿದ ಸಂಭಾಷಣೆಯೊAದಿಗೆ ತಮ್ಮ ಉದ್ಯೋಗ, ಸ್ಥಾನಮಾನ, ಅಂತಸ್ತುಗಳನ್ನು ಬದಿಗಿಟ್ಟು ಮಾತಾಡಿಕೊಂಡು ೩೦ ವರ್ಷಗಳ ಹಿಂದಿನ ಪ್ರೌಢಶಾಲಾ ದಿನಗಳ ಅವಧಿಯ ಬಾಲ್ಯದ ನೆನಪಾದ ತುಂಟಾಟ, ಬೈದಾಟ, ಜಗಳ, ಶಾಲೆಗೆ ಚಕ್ಕರ್ ಹಾಕಿದ್ದು, ಸಿನಿಮಾಗೆ ಹೋಗಿ ಸಿಕ್ಕಿ ಹಾಕಿಕೊಂಡಿದ್ದು, ಮಾಡಿದ ಹಾಗೂ ಮಾಡದ ತಪ್ಪಿಗೆ ಶಿಕ್ಷಕರಿಂದ ಪೆಟ್ಟು ತಿಂದಿದ್ದು, ಕೀಟಲೆ ಮಾಡಿ ಪೋಷಕರ ವರೆಗೆ ದೂರು ಹೋಗಿದ್ದು, ತಿಂಡಿಗಾಗಿ ಗುಂಪುಗಾರಿಕೆ ಮಾಡಿದ್ದು, ಟೆಸ್ಟ್-ಪರೀಕ್ಷೆಗಳಲ್ಲಿ ಕಾಫಿ ಹೊಡೆದು ಸಿಕ್ಕಿ ಹಾಕಿಕೊಂಡಿದ್ದು, ಸಹ ವಿದ್ಯಾರ್ಥಿನಿಯರನ್ನು ಕೀಚಾಯಿಸಿದ್ದು ಒಂದಾಎರಡಾ ಯಪ್ಪಾ.. ಇಂತಹ ಹಲವಾರು ಘಟನೆಗಳನ್ನು ನೆನಪಿಸಿಕೊಂಡು ನಕ್ಕು ನಲಿಯಲಾಯಿತು.

ಆರಂಭದಲ್ಲಿ ಸ್ವಾಗತ ಪಾನೀಯವಾಗಿ ಎಳೆನೀರು ವಿತರಿಸಲಾಯಿತು. ನಂತರ ಶಾಲೆಯ ಹೆಸರಿನಲ್ಲಿ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಿಸುತ್ತಾ ಸಿಹಿಯೊಂದಿಗೆ ಸವಿನೆನಪುಗಳನ್ನು ಸವಿಯಲಾಯಿತು. ತದನಂತರ ಪರಸ್ಪರ ಚರ್ಚೆಯಲ್ಲಿ ಯಾರು ಎಲ್ಲಿ ಏನು ಉದ್ಯೋಗ, ಕುಟುಂಬ ವಿವರಗಳ ಬಗ್ಗೆ ವಿನಿಮಯ ಮಾಡಿಕೊಳ್ಳಲಾಯಿತು. ಇದಾದ ನಂತರ ಲಗೋರಿ ಸೇರಿದಂತೆ ವಿವಿಧ ವಿನೋದಕ ಹಾಗೂ ಸ್ಪರ್ಧಾತ್ಮಕ ಆಟೋಟಗಳನ್ನು ಹಾಡಿ ಸವಿಯಾದ ಸಸ್ಯಹಾರಿ ಊಟ ಸವಿದು ಉಭಯ ಕುಶಲೋಪರಿ ನಡೆಸಿ ಮುಂದಿನ ಕಾರ್ಯಕ್ರಮ ಆಯೋಜಿಸಿ ನಿರಂತರ ಸಂಪರ್ಕದ ಬಗ್ಗೆ ಚರ್ಚಿಸಿ ಎಲ್ಲರನ್ನೂ ಬೀಳ್ಕೊಡಲಾಯಿತು.

ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿಯ ನಂತರ ತವರಿಗೆ ವಾಪಸ್ಸಾದ ಶ್ರೀನಾಥ್ ತನ್ನ ಹಳೆಯ ಗೆಳೆಯರನ್ನು ಒಂದೆಡೆ ಕಲೆ ಹಾಕುವ ಕಾರ್ಯಕ್ಕೆ ೨೦೧೮ ರಲ್ಲಿ ನೆರವಾಗಿದ್ದು ಕೋಲಾರದ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್ ಕುಮಾರ್ ಅವರು, ಸ್ಥಳೀಯರನ್ನು ಸಂಪರ್ಕಿಸಿ ಬೇರೆಡೆ ಇರುವ ಹಳೆಯ ಗೆಳೆಯರು ಎಲ್ಲೆಲ್ಲಿ ಇರುವರೆಂದು ಅವರ ಮೊಬೈಲ್ ಸಂಖ್ಯೆಗಳನ್ನು ಸಂಪಾದಿಸಿ ನಂತರ ಸಾಮಾಜಿಕ ತಾಣಗಳ ಮೂಲಕ ಮಾಹಿತಿ ಹರಡಿ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯದಲ್ಲಿ ನೆರವಾಗಿದ್ದರು ಎಂದು ನೆನಪಿಸಿಕೊಳ್ಳಲಾಯಿತು. ಇದರೊಂದಿಗೆ ೩೦ ವರ್ಷಗಳ ನಂತರ ಒಂದೆಡೆ ಒಟ್ಟಾಗಿ ಸೇರಿದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನದ ಬೆಸುಗೆ ಮರೆಯಲಾದ ಮಧುರ ಕ್ಷಣವಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande