ಕಾಯಂಗೊಳಿಸಿ ಭದ್ರತೆ ಒದಗಿಸಿ ; ಅತಿಥಿ ಉಪನ್ಯಾಸಕರ ಸಂಘದ ಮನವಿ
ಕಾಯಂ
ಖಾಯಂಗೊಳಿಸಿ ಭದ್ರತೆ ಒದಗಿಸಿ ; ಅತಿಥಿ ಉಪನ್ಯಾಸಕರ ಸಂಘದ ಮನವಿ


ಖಾಯಂಗೊಳಿಸಿ ಭದ್ರತೆ ಒದಗಿಸಿ ; ಅತಿಥಿ ಉಪನ್ಯಾಸಕರ ಸಂಘದ ಮನವಿ


ಬಳ್ಳಾರಿ, 15 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 10 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಿ ಜೀವನ ಭದ್ರತೆ ಒದಗಿಸಲು ಕೋರಿ ಅತಿಥಿ ಉಪನ್ಯಾಸಕರ ಸಂಘವು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜೆ.ಎಸ್. ಆಂಜನೇಯಲು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದೆ.

ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕಡಿಮೆ ಸಂಭಾವನೆಯಲ್ಲೇ ಬದುಕು ಸಾಗಿಸುವ ಪರಿಸ್ಥಿತಿ ಇದೆ. 10 ತಿಂಗಳ ಸೇವಾ ಅವಧಿಯನ್ನು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಅದನ್ನು ಎಂಟು ತಿಂಗಳಿಗೆ ಇಳಿಕೆ ಮಾಡಿರುವುದರಿಂದ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಸೇವೆಯಿಂದ ಬಿಡುಗಡೆ ಆದಮೇಲೂ ಪರೀಕ್ಷೆಯ ಕೆಲಸಗಳು ಸೇರಿ ಶೈಕ್ಷಣಿಕ ಚಟುವಟಿಕೆಗಳಿಗೆ ಕಾಲೇಜುಗಳು ನಮ್ಮ ಸೇವೆಯನ್ನು ಪಡೆಯುತ್ತಿದ್ದು, ಸಂಭಾವನೆ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.

ಯುಜಿಸಿ ಮತ್ತು ನಾನ್-ಯುಜಿಸಿ ಎಂಬ ತಾರತಮ್ಯ ಮಾಡದೆ ಎಲ್ಲಾ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಮಾಡಬೇಕು. 2023ರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವ ಭರವಸೆ ನೀಡಲಾಗಿತ್ತು. ಆ ಭರವಸೆಯನ್ನು ಸರ್ಕಾರ ಈಡೇರಿಸಿ, ರಾಜ್ಯದ ಸಾವಿರಾರು ಅತಿಥಿ ಉಪನ್ಯಾಸಕರಿಗೆ ಶಾಶ್ವತ ಉದ್ಯೋಗ ಭದ್ರತೆ ಒದಿಸುವ ಮೂಲಕ ನೆಮ್ಮದಿ ಜೀವನಕ್ಕೆ ಅವಕಾಶ ನೀಡಬೇಕು ಎಂದು ಸಂಘ ಕೋರಿದೆ.

ಕಾಲೇಜಿನ ಅತಿಥಿ ಉಪನ್ಯಾಸಕರಾದ ಡಾ. ಟಿ. ದುರುಗಪ್ಪ, ಡಾ. ಹನುಮೇಶ, ರಫೀಕ್, ಸಿದ್ದೇಶ್, ಡಾ. ಕೆ. ಬಸಪ್ಪ, ಡಾ. ಗಿರೀಶ್ ಕುಮಾರ್ ಗೌಡ, ಮಾರೆಪ್ಪ, ಕುಮಾರಸ್ವಾಮಿ ಮತ್ತು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande