
ಬಾಗಲಕೋಟೆ, 15 ಜೂನ್ (ಹಿ.ಸ.) :
ಆಂಕರ್ : ಮಣಿಕಟ್ಟಿ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳ ಭಾವಪೂರ್ಣ ಭಾಷಣ ಕೇಳಿ ಶಾಸಕ ಉಮೇಶ್ ಮೇಟಿ ಅವರು ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ಮಠದ ಸ್ವಾಮೀಜಿಗಳು ದಿವಂಗತ ಹೆಚ್.ವೈ. ಮೇಟಿ ಅವರ ಜನಪರ ಸೇವೆ, ಸರಳ ಜೀವನ ಶೈಲಿ ಹಾಗೂ ಸಮಾಜದೊಂದಿಗೆ ಅವರು ಹೊಂದಿದ್ದ ಆತ್ಮೀಯ ಬಾಂಧವ್ಯವನ್ನು ಸ್ಮರಿಸಿದರು. ಹೆಚ್.ವೈ. ಮೇಟಿ ಅವರು ಮಠದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ನೀಡಿದ ಸಹಕಾರ, ಮಠದೊಂದಿಗೆ ಮೇಟಿ ಕುಟುಂಬ ಹೊಂದಿದ್ದ ನಿಕಟ ಸಂಬಂಧದ ಕುರಿತು ಸ್ವಾಮೀಜಿಗಳು ತಮ್ಮ ಭಾಷಣದಲ್ಲಿ ವಿವರಿಸಿದರು.
ಹೆಚ್.ವೈ. ಮೇಟಿ ಅವರು ಅಧಿಕಾರದಲ್ಲಿದ್ದಾಗಲೂ ಜನರ ನಡುವೆ ಸರಳವಾಗಿ ಬೆರೆತು, ಬಡವರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಸ್ವಾಮೀಜಿಗಳು ಸ್ಮರಿಸಿದರು.
ತಂದೆ ಹೆಚ್.ವೈ. ಮೇಟಿ ಅವರ ಸೇವೆ ಹಾಗೂ ನೆನಪುಗಳನ್ನು ಸ್ವಾಮೀಜಿಗಳು ಪ್ರಸ್ತಾಪಿಸುತ್ತಿದ್ದಂತೆ ಶಾಸಕ ಉಮೇಶ್ ಮೇಟಿ ಅವರು ಭಾವುಕರಾದರು. ಸ್ವಾಮೀಜಿಗಳ ಮಾತುಗಳನ್ನು ಆಲಿಸುತ್ತ ಕಣ್ಣೀರು ಹಾಕಿದ ಅವರ ಭಾವನಾತ್ಮಕ ಕ್ಷಣವು ಕಾರ್ಯಕ್ರಮದಲ್ಲಿದ್ದ ಭಕ್ತರು ಹಾಗೂ ಮುಖಂಡರ ಮನಸ್ಸನ್ನು ಮುಟ್ಟಿತು.
ಈ ಸಂದರ್ಭದಲ್ಲಿ ಮಠದ ಭಕ್ತರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಧಾರ್ಮಿಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮವು ಭಕ್ತಿ ಮತ್ತು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande