
ಗದಗ, 15 ಜೂನ್ (ಹಿ.ಸ.) :
ಆ್ಯಂಕರ್ : ಜಗದ್ಗುರು ಆದಿ ಶಂಕರಾಚಾರ್ಯರ ಅದೈತ ತತ್ವ, ಸನಾತನ ಧರ್ಮದ ಸಂದೇಶ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವ ಉದ್ದೇಶದಿಂದ ಗದಗದ ಶಂಕರ ಮಠದಲ್ಲಿ ಆಯೋಜಿಸಲಾಗುತ್ತಿರುವ ‘ಅದೈತಾನುಭವ’ ಕಾರ್ಯಕ್ರಮವು ತನ್ನ 50ನೇ ಸಂಚಿಕೆಯನ್ನು ಯಶಸ್ವಿಯಾಗಿ ಪೂರೈಸಿ ಸುವರ್ಣ ಸಂಭ್ರಮ ಆಚರಿಸಿತು.
ಅದೈತ ಪ್ರಸಾರ ಪರಿಷತ್ತು ಟ್ರಸ್ಟ್ (ರಿ), ಗದಗ ವತಿಯಿಂದ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮದ ಸುವರ್ಣ ಸಂಭ್ರಮವನ್ನು ಶಂಕರ ಮಠದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಅಂಶಗಳನ್ನು ಒಳಗೊಂಡ ಈ ಕಾರ್ಯಕ್ರಮವು ಭಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ವಿಜಯನಗರ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಭಟ್ಟ ಹಾಗೂ ಕಾರ್ಯದರ್ಶಿ ವಿಶ್ವನಾಥ್ ಡಿ. ಅವರು ‘ಶಂಕರ ದಿಗ್ವಿಜಯ ಯಾತ್ರೆ’ ಹಾಗೂ ‘ಅದೈತ ಪ್ರಚಾರ’ ವಿಷಯದ ಕುರಿತು ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು. ತಮ್ಮ ಸುಶ್ರಾವ್ಯ ಗಾನ, ಅರ್ಥಪೂರ್ಣ ವ್ಯಾಖ್ಯಾನ ಹಾಗೂ ಮನಮುಟ್ಟುವ ನಿರೂಪಣೆಯ ಮೂಲಕ ಅವರು ಆದಿ ಶಂಕರಾಚಾರ್ಯರ ಜೀವನದ ವಿವಿಧ ಹಂತಗಳನ್ನು ಶ್ರೋತೃಗಳ ಮುಂದಿಟ್ಟರು.
ಶಂಕರಾಚಾರ್ಯರ ಬಾಲ್ಯ ಜೀವನ, ಅಸಾಧಾರಣ ಬುದ್ಧಿಮತ್ತೆ, ವಿದ್ಯಾಭ್ಯಾಸ, ಸನ್ಯಾಸ ಸ್ವೀಕಾರ, ದೇಶದಾದ್ಯಂತ ನಡೆಸಿದ ದಿಗ್ವಿಜಯ ಯಾತ್ರೆ, ಅವೈದಿಕ ಹಾಗೂ ಸನಾತನ ವಿರೋಧಿ ಮತಗಳ ವಿರುದ್ಧ ನಡೆಸಿದ ತಾತ್ವಿಕ ಚರ್ಚೆಗಳು, ಧರ್ಮಸ್ಥಾಪನೆಗಾಗಿ ಕೈಗೊಂಡ ಪ್ರಯತ್ನಗಳು ಸೇರಿದಂತೆ ಅನೇಕ ಮಹತ್ವದ ಘಟನೆಗಳನ್ನು ಗಮಕದ ಮೂಲಕ ಜೀವಂತವಾಗಿ ಕಟ್ಟಿಕೊಡಲಾಯಿತು. ಅಲ್ಲದೇ ಶಂಕರರು ಪ್ರತಿಪಾದಿಸಿದ ಅದೈತ ಸಿದ್ಧಾಂತದ ಮಹತ್ವ, ಪಂಚಾಯತನ ಪೂಜಾ ಪದ್ಧತಿಯ ಸ್ಥಾಪನೆ ಹಾಗೂ ದೇವರ ಆರಾಧನೆಗೆ ಎಲ್ಲರಿಗೂ ಸಮಾನ ಹಕ್ಕು ಇದೆ ಎಂಬ ಸಂದೇಶವನ್ನು ಸುಲಭವಾಗಿ ಮತ್ತು ಮನೋಜ್ಞವಾಗಿ ವಿವರಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ವೇದಮೂರ್ತಿ ರತ್ನಾಕರ ಭಟ್ಟ ಜೋಶಿ ಅವರು ಆಶೀರ್ವಚನ ನೀಡುತ್ತಾ, ಶಂಕರಾಚಾರ್ಯರ ಕಾಲಘಟ್ಟದ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳನ್ನು ವಿವರಿಸಿದರು. ಶಂಕರರು ಭಾರತದೆಲ್ಲೆಡೆ ಸಂಚರಿಸಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದ ರೀತಿ, ಅವರು ಸ್ಥಾಪಿಸಿದ ಚತುರ್ ಆಮ್ನಾಯ ಪೀಠಗಳ ಮಹತ್ವ ಹಾಗೂ ಅವರ ಅಮೂಲ್ಯ ಕೃತಿಗಳ ಕುರಿತು ವಿಶದವಾಗಿ ಮಾತನಾಡಿದರು.
ಅದೈತ ಪ್ರಸಾರ ಪರಿಷತ್ತಿನ ಅಧ್ಯಕ್ಷ ರಾಮಚಂದ್ರ ಮೋನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಅದೈತಾನುಭವ’ ಕಾರ್ಯಕ್ರಮ ನಡೆದು ಬಂದ ಹಾದಿಯನ್ನು ಸ್ಮರಿಸಿದರು. ಕಳೆದ ಐವತ್ತು ಕಾರ್ಯಕ್ರಮಗಳ ಅವಧಿಯಲ್ಲಿ ಸಮಾಜಕ್ಕೆ ನೀಡಿರುವ ವಿವಿಧ ಸೇವಾ ಚಟುವಟಿಕೆಗಳು, ಭಕ್ತಿ ಸಂಗೀತ ಕಾರ್ಯಕ್ರಮಗಳು, ಭಜನೆಗಳು, ಪ್ರತಿವರ್ಷ ಆಚರಿಸುವ ಆದಿ ಶಂಕರ ಜಯಂತಿ, ವೈದ್ಯಕೀಯ ಶಿಬಿರಗಳು ಹಾಗೂ ಧರ್ಮ ಮತ್ತು ವಿಜ್ಞಾನದ ಪರಸ್ಪರ ಸಂಬಂಧವನ್ನು ಪರಿಚಯಿಸುವ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸವನ್ನು ಪರಿಷತ್ತು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಅವರನ್ನು ವಿವಿಧ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸುವಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ನೀಡುತ್ತಿರುವ ಕೊಡುಗೆಗಾಗಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರೊ. ಅನಿಲ ವೈದ್ಯ ಅವರು ಅತಿಥಿಗಳನ್ನು ಸನ್ಮಾನಿಸಿ ಕಾರ್ಯಕ್ರಮವನ್ನು ಪರಿಚಯಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಆದಿ ಶಂಕರಾಚಾರ್ಯರ ತತ್ವಚಿಂತನೆ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಯುವಜನರಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಭಕ್ತಿ ಸೇವೆಯನ್ನು ಎಸ್.ಡಿ. ಹಂದಿಗೋಳ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮವು ವೇದಮೂರ್ತಿ ಶಂಕರಭಟ್ಟ ಸೊರಟೂರ ಹಾಗೂ ಅವರ ವೃಂದದವರ ವೇದಘೋಷದೊಂದಿಗೆ ಆರಂಭಗೊಂಡಿತು. ಕು. ತನ್ವಿ ಮೋನೆ ಪ್ರಾರ್ಥನೆ ಸಲ್ಲಿಸಿದರೆ, ಕು. ಸಂಕಲ್ಪ ಪಾಟೀಲ ಅವರು ಶಂಕರ ಸ್ತೋತ್ರ ಪಠಣ ಮಾಡಿದರು.
ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಣೆ ನಡೆಸಿದರೆ, ಸುಮನ ಪಾಟೀಲ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎ.ಡಿ. ಗೋಡಖಿಂಡಿ, ರವಿ ಪೂಜಾರ, ಗಣಪತಿ ಕೌಜಲಗಿ, ಅಪ್ಪಣ್ಣಭಟ್ಟ ಸೊರಟೂರ, ಸಂಜಯ ತೇಂಬದಮನಿ, ರವೀಂದ್ರ ಜೋಶಿ, ಪಿ.ವಿ. ಇನಾಮದಾರ, ಆರ್.ಆರ್. ಜೋಶಿ, ಹೇಮಂತ ಕುಲಕರ್ಣಿ, ಜಿ.ಬಿ. ಪಾಟೀಲ, ಕೆ.ಡಿ. ನಾಡಿಗೇರ, ಬಾಲಕೃಷ್ಣ ಭಟ್ಟ, ನಾಗೇಶ ಗುಡಿ, ಡಿ.ಎಲ್. ಕುಲಕರ್ಣಿ, ಜಿ.ಪಿ. ದೇಶಪಾಂಡೆ, ಆರ್.ಆರ್. ರಂಗಾಪುರ, ಮುಕ್ತಾ ಉಡುಪಿ, ಗೌರಕ್ಕ ಪಾಟೀಲ, ಛಾಯಾ ಕುಲಕರ್ಣಿ, ವಿಜಯಾ ವೈದ್ಯ, ಸುಧಾ ಮೋನೆ, ರಮ್ಯಾ ಪೂಜಾರ, ಪಲ್ಲವಿ ಕುಲಕರ್ಣಿ, ಜ್ಯೋತಿ ಇನಾಮದಾರ, ಶೈಲಜಾ ಸೊರಟೂರ ಸೇರಿದಂತೆ ನೂರಾರು ಶಂಕರ ಭಕ್ತರು, ಧರ್ಮಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕೊನೆಯಲ್ಲಿ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಆದಿ ಶಂಕರಾಚಾರ್ಯರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ‘ಅದೈತಾನುಭವ’ ಕಾರ್ಯಕ್ರಮ ಮಹತ್ವದ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯನ್ನು ಮುಂದುವರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP