
ಬಾಗಲಕೋಟೆ, 15 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ಚಿಮ್ಮಡ ಗ್ರಾಮದಲ್ಲಿ ರೈತರಿಗೆ ಅನುಕೂಲವಾಗುವ ಮಹತ್ವದ ನೀರಾವರಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿದ್ದು ಸವದಿ ಇಂದು ಚಾಲನೆ ನೀಡಿದರು.
ಕ.ನೀ.ನಿ.ನಿ.ಘ.ಎ.ದಂ.ಕಾ. ವಿಭಾಗ ನಂ-2, ಜಮಖಂಡಿ ವ್ಯಾಪ್ತಿಯ ಮೈಗೂರ ಪಂಚು ಕಾಲುವೆ ಮತ್ತು ಅದರ ಮೈನರ್ ಕಾಲುವೆಗಳು ಹಾಗೂ ತೇರದಾಳ, ಜಗದಾಳ, ಹೊಸೂರ ಮತ್ತು ನಂದಗಾಂವ ಹಂಚು ಕಾಲುವೆಗಳ ಆಯ್ದ ಭಾಗಗಳಲ್ಲಿ ಹೂಳು ತೆಗೆಯುವಿಕೆ, ಕಂಟಿ ತೆರವು ಹಾಗೂ ಇತರೆ ದುರಸ್ತಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು, ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಕಾಮಗಾರಿಗೆ ಚಾಲನೆ ನೀಡಿ, ಕಾಲುವೆಗಳ ಸಮರ್ಪಕ ನಿರ್ವಹಣೆಯಿಂದ ರೈತರಿಗೆ ನೀರಿನ ಸರಬರಾಜು ಸುಗಮವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನೀರಾವರಿ ಕಾಲುವೆಗಳಲ್ಲಿ ವರ್ಷಗಳಿಂದ ಸಂಗ್ರಹವಾಗಿರುವ ಹೂಳು ಮತ್ತು ಬೆಳೆದಿರುವ ಕಂಟಿಗಳನ್ನು ತೆರವುಗೊಳಿಸುವುದರಿಂದ ನೀರಿನ ಹರಿವು ಉತ್ತಮಗೊಳ್ಳಲಿದ್ದು, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ನೆರವಾಗಲಿದೆ. ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಲಭ್ಯವಾಗುವ ನಿರೀಕ್ಷೆ ಇದೆ.
ರೈತರ ಹಿತದೃಷ್ಟಿಯಿಂದ ನೀರಾವರಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಕೈಗೊಂಡಿರುವ ಈ ಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande