
ಕೋಲಾರ, ೧೫ ಜೂನ್ (ಹಿ.ಸ) :
ಆ್ಯಂಕರ್ : ಜಾನಪದ ಕಲೆಯನ್ನೇ ನಂಬಿ ಬದುಕುತ್ತಿದ್ದ ಇಂತಹ ಬೆಳೆಯುತ್ತಿರುವ ಕಲಾವಿದರ ಬದುಕು ಅತಂತ್ರ ಸ್ಥಿತಿಯಾಗಿದೆ. ಒಬ್ಬ ಕಲಾವಿದ ಇಂತಹ ದೊಡ್ಡ ಕಾರ್ಯಕ್ರಮವನ್ನು ಸ್ವಂತ ಖರ್ಚಿನಲ್ಲಿ ಮಾಡಬಹುದಾದರೆ ಅವರು ಪಟ್ಟ ಪಾಡು ಹೇಳತೀರದು. ಹಾಗಾಗಿ ಕಲಾವಿದರೆಲ್ಲರೂ ಒಗ್ಗಟ್ಟಾದಾಗ ನಾವು ನಮ್ಮ ಕಲೆಯನ್ನು ಮತ್ತು ಜೀವನವನ್ನು ತೃಪ್ತಿಕರವಾಗಿ ನಡೆಸಲು ಸಾಧ್ಯ. ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಖ್ಯಾತ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ಅಭಿಪ್ರಾಯಪಟ್ಟರು.
ಕೋಲಾರ ನಗರದ ಕನ್ನಡ ಭವನದಲ್ಲಿ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ಕರ್ನಾಟಕದ ಖ್ಯಾತ ಜಾನಪದ ಹಾಡುಗಾರ ಬಾನಂದೂರು ಕೆಂಪಯ್ಯ ಅವರ ೭೫ ಜನ್ಮ ದಿನಾಚರಣೆ ಅಂಗವಾಗಿ ಮೂಡಲಸೀಮೆಯ ಕಾಲವಿದರಿಂದ ಗೀಯಗಾಯನ ಗುಚ್ಚ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕತೆಯ ಜಗತ್ತಿನಲ್ಲಿ ಕಲಾವಿದರ ಬದುಕು ಮೂರಾಬಟ್ಟೆಯಾಗುತ್ತಿದೆ. ಸಂಸ್ಥೆಗಳು ಹಾಗೂ ಸರ್ಕಾರಿ ಅಕಾಡೆಮಿಗಳು ಇಂತಹ ಮೂಲೆಗುಂಪಾದ ಒಳ್ಳೆಯ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಿದಾಗ ಜಾನಪದ ಕಲೆಗಳು ಉಳಿಬಹುದೆಂದು ಹೇಳುತ್ತಾ, ಎಲ್ಲೋ ಜೋಗಪ್ಪ, ತರವಲ್ಲ ತಗಿ ನಿನ ತಂಬೂರಿ, ತನುವಿನೊಳಗನುದಿನವಿದ್ದು ಮುಂತಾದ ಜಾನಪದ ಹಾಡುಗಳನ್ನು ಹೇಳುತ್ತಾ ಎಲ್ಲರನ್ನೂ ಬೆರಗುಗೊಳಿಸಿದರು.
ಪತ್ರಕರ್ತ ಗಣೇಶ್ ಬಾನಂದೂರು ಕೆಂಪಯ್ಯ ನವರ ಕುರಿತು ಮಾತನಾಡಿ ತಂದೆ ತಾಯಿಯಿಂದ ಜಾನಪದ ಹಾಡುಗಳು ರಕ್ತಗರ್ಭಿತವಾಗಿ ಪಡೆದುಕೊಂಡ ಕೆಂಪಯ್ಯ ಜಾನಪದ ಕ್ಷೇತ್ರದಲ್ಲಿ ಗಗನಕ್ಕೇರಿರುವುದು ಅದ್ಬುತವಾದ ಸಾಧನೆ ಮಾಡಿದ್ದಾರೆ. ಕೇವಲ ಗಾಯಕರಾಗದೆ ಶಿಕ್ಷಣ ಕ್ಷೇತ್ರದಲ್ಲಿಯೂ ಡಾಕ್ಟರೇಟ್ ಪಡೆದು ಎಲ್ಲಾ ಜಾನಪದ ಕಲಾವಿದರನ್ನು ಬೆಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಕಾಡೆಮಿಯ ಅಧ್ಯಕ್ಷರಾದ ಸಮಯದಲ್ಲಿ ಕಲಾವಿದ ಬದುಕನ್ನು, ಅವರ ಸಾಧನೆಗಳನ್ನು ಕುರಿತು ಹೊರತಂದ ಗ್ರಂಥ ಇಂದಿಗೂ ಮಾದರಿಯಾಗಿದೆ. ಅವರ ಹಾದಿಯಲ್ಲಿ ಕೋಲಾರದ ಕಲಾವಿದರೆಲ್ಲರೂ ಬೆಳೆದಿರುವುದು ಸಂತಸದ ಸಂಗತಿ ಎಂದರು.
ಖ್ಯಾತ ಜಾನಪದ ಕಲಾವಿದ ವೇಮಗಲ್ ನಾರಾಯಣಸ್ವಾಮಿ ಮಾತಾನಾಡಿ ಕೋಲಾರದಲ್ಲಿ ಬಹಳಷ್ಟು ಕಲಾವಿದರಿದ್ದಾರೆ. ಅವರಿಗೆ ಸೂಕ್ತ ಅವಕಾಶಗಳು ದೊರಕಬೇಕಾಗಿದೆ. ಹಿರಿಯ ಕಲಾವಿದರು ಅವರನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.
ಕರ್ನಾಟಕದಲ್ಲಿ ಕೋಲಾರ ಜಾನಪದದ ಮಣ್ಣಿನ ವಾಸನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಮತ್ತು ಕೊಂಡೊಯ್ಯುತ್ತಿರುವ ಅನೇಕ ಪ್ರಮುಖ ಕಲಾವಿದರಿದ್ದಾರೆ. ನಮ್ಮ ಪರಂಪರೆಯನ್ನು ಮುಂದುವರಿಸುವ ಪ್ರಯತ್ನ ಹಿರಿಯ ಕಲಾವಿದರು ಮಾಡಬೇಕೆಂದು ಹೇಳುತ್ತಾ ಉತ್ತರ ಕರ್ನಾಟಕದ ಮೂಲ ಜಾನಪದ ಹಾಡುಗಳನ್ನು ಹೇಳಿ ಎಲ್ಲರ ಮನ ರಂಜಿಸಿದರು.
ಕರ್ನಾಟಕ ಸಂಗೀತ, ನೃತ್ಯ ಕಲಾ ಅಕಾಡಮಿ ಸದಸ್ಯ ಡಿ.ಆರ್ ರಾಜಪ್ಪ ಮಾತಾನಾಡಿ ಆಧುನಿಕತೆಯ ಪ್ರಭಾವದಿಂದ ಜಾನಪದ ಕಲೆಗಳು ಮರೆಯಾಗುತ್ತಿದ್ದು, ಈ ಕಲೆಯನ್ನು ನಂಬಿ ಬದುಕುವ ಕಲಾವಿದರ ಜೀವನ ಕೆಲವೊಮ್ಮೆ ಅತಂತ್ರವಾಗುವ ಸಾಧ್ಯತೆಯೂ ಇದೆ. ಇಂತಹ ಕಲಾವಿದರನ್ನು ಪ್ರೋತ್ಸಾಹಿಸಲು ಕರ್ನಾಟಕ ಜಾನಪದ ಅಕಾಡೆಮಿಯು ಜನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಹಾಗಾಗಿ ಇಂತಹ ಕೋಲಾರದಂತಹ ಕಲಾವಿದರನ್ನು ಬೆಳೆಸಿದ ಬಾನಂದೂರು ಅವರನ್ನು ನೆನಪಿಸುತ್ತಾ ಅವರ ಪ್ರೊತ್ಸಾಹ ಮತ್ತು ಪ್ರೇರಣೆ ಮರೆಯಲು ಸಾಧ್ಯವಿಲ್ಲ ಎನ್ನುತ್ತಾ ವೇದಿಕೆಯಲ್ಲಿ ಜಾನಪದ ಹಾಡುಗಳನ್ನು ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಕಲಾ ಅಕಾಡಮಿ ಸದಸ್ಯರಾದ ಮದ್ದೇರಿ ಮುನಿರೆಡ್ಡಿ ಮಾತಾನಾಡಿ ಕೋಲಾರ ಜಾನಪದ ಕಲಾವಿದರು ಕರ್ನಾಟಕದಲ್ಲಿರುವ ಪ್ರತಿಯೊಂದು ಹಳ್ಳಿಗಳ ಮಣ್ಣಿನ ವಾಸನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಅನೇಕ ಕಲಾವಿದ್ದಾರೆ. ಇಂತಹ ಸಾಲಿನಲ್ಲಿ ಇದೀಗ ವೆಂಕಟಾಚಲಪತಿ ಅವರು ಒಂದು ಒಳ್ಳೆಯ ಕಾರ್ಯಕ್ರಮ ಮಾಡಿ ಕೋಲಾರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವಂತೆ ಮಾಡಿದ್ದಾರೆ ಹಾಗಾಗಿ ಅವರನ್ನು ಶ್ಲಾಘಿಸುತ್ತಾ ಇನ್ನೂ ಉತ್ತರದ ಕಾರ್ಯಕ್ರಮಗಳನ್ನು ಮಾಡಲಿ ಎಂದರು.
ಕವಿ ಡಾ. ಶರಣಪ್ಪ ಗಬ್ಬೂರು ಮಾತನಾಡಿ ಕೋಲಾರದ ಕಲಾವಿದರು ಇನ್ನೂ ಬಡತನದಲ್ಲಿಯೇ ಜೀವಂತವಾಗಿದ್ದಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಎಂದರೆ ವೆಂಕಟಾಚಲಪತಿ ಕಲಾವಿದನೇ ಸಾಕ್ಷಿಯಾಗುತ್ತಾರೆ. ಒಳ್ಳೆಯ ಮನಸ್ಸಿನಿಂದ ನಾಡಿನ ಹೆಸರಾಂತ ಹಾಡುಗಾರರನ್ನು ಇಲ್ಲಿ ಗೌವರಿಸುವ ಕಾರ್ಯ ಮಾಡುತ್ತಿರುವುದು ಕೋಲಾರ ಜಿಲ್ಲೆಯ ಕೀರ್ತಿ ಇಡೀ ನಾಡಿಗೆ ಪರಿಚಯಿಸುವ ಕೆಲಸ ನಮ್ಮ ವೆಂಕಟಾಚಲಪತಿ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕವಿ ಲಕ್ಷ್ಮಯ್ಯ, ಅರಿನಾಗನಹಳ್ಳಿ, ಮುನಿವೆಂಕಟಮ್ಮ, ಶ್ರೀ ನಿಜನಾನಂದ ಸುಬ್ಬಾರೆಡ್ಡಿ ಸ್ವಾಮಿ, ಗಮನ ಶಾಂತಮ್ಮ, ಬುದ್ಧಿಮಾಂದ್ಯ ಶಾಲೆಯ ಶಂಕರ್, ಎಂ.ಎಸ್ ಶೇಖರ್ ಸೋಮಣ್ಣ ಮುಂತಾದವರಿಗೆ ಶ್ರೀ ಬಾನಂದೂರು ಕೆಂಪಯ್ಯ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ಚಂದ್ರಮೌಳಿ, ಕುಡುವನಹಳ್ಳಿ ಗಣೇಶ್, ರೈತ ಸಂಘದ ಅಬ್ಬಣಿ ಶಿವಪ್ಪ, ಮಾರ್ಜೇನಹಳ್ಳಿ ಬಾಬು, ಕಾರ್ಯನಿರ್ವಾಹಕ ಅಭಿಯಂತರರು ಮಂಜುನಾಥ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಸಂಗಸ0ದ್ರ ವಿಜಯಕುಮಾರ್, ತಬಲ ವಾದಕರು ರಮಣ, ಕೀ ಬೋರ್ಡ್ ಚಂದ್ರಪ್ಪ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್