
ಬಳ್ಳಾರಿ, 15 ಜೂನ್ (ಹಿ.ಸ.) :
ಆ್ಯಂಕರ್ : ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಬಳ್ಳಾರಿ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಆಗ್ರಹಿಸಿ ಸಾಮಾಜಿಕ ಹೋರಾಟಗಾರರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಸಿದ್ದೇಶ್ ಊಳೂರು ಅವರ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದವರು, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಬಳ್ಳಾರಿಯ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮೇ 29 ರಿಂದ ಪ್ರಾರಂಭವಾಗಬೇಕಿತ್ತು. ಶೈಕ್ಷಣಿಕ ವರ್ಷ ಪ್ರಾರಂಭವಾಗಿ 17 ದಿನಗಳಾದರೂ ಪ್ರಾರಂಭವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಆತಂಕದಲ್ಲಿದ್ದು, ಜಿಲ್ಲಾಡಳಿತ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಶಾಲೆಯನ್ನು ತೆರೆಯುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಆರ್ಟಿಇ ಕಾಯ್ದೆ 2009ರ ಸೆಕ್ಷನ್ 3ರ ಸೆಕ್ಷನ್ 8ರ ಪ್ರಕಾರ ಅಪರಾಧವಾಗಿದೆ. ವಿಳಂಬಕ್ಕೆ ಕಾರಣವಾಗಿರುವ ಸಮಾಜ ಕಲ್ಯಾಣ ಇಲಾಖೆಯ ಬಳ್ಳಾರಿಯ ಅಧಿಕಾರಿಗಳ ವಿರುದ್ಧ ಆರ್ಟಿಇ ಸೆಕ್ಷನ್ 17 ಮತ್ತು ಕೆಸಿಎಸ್ಆರ್ ನಿಯಮ 214(3) ಪ್ರಕಾರ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್