
ಬಾಗಲಕೋಟೆ, 15 ಜೂನ್ (ಹಿ.ಸ.) :
ಆಂಕರ್ : ಸಾರ್ವಜನಿಕರ ಕೆಲಸಗಳನ್ನು ವಿಳಂಬಗೊಳಿಸಲಾಗುತ್ತಿದೆ ಎಂಬ ಆರೋಪಗಳ ನಡುವೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ (BTDA) ಮತ್ತೊಂದು ವಿವಾದದ ಕೇಂದ್ರ ಬಿಂದುವಾಗಿದೆ. ಅಕ್ರಮ ಪ್ಲಾಟ್ ಹಂಚಿಕೆ, ಕಡತ ನಿರ್ವಹಣೆಯಲ್ಲಿನ ಅಕ್ರಮಗಳ ಆರೋಪಗಳ ಕುರಿತು ದಾಖಲೆಗಳೊಂದಿಗೆ ಪ್ರಶ್ನಿಸಿದ ಪತ್ರಕರ್ತರೊಂದಿಗೆ ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ಬಿಟಿಡಿಎ ಕಚೇರಿಯಲ್ಲಿ ಕೆಲಸ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ರೈತನೊಬ್ಬ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಘಟನೆ ರಾಜ್ಯದ ಗಮನ ಸೆಳೆದಿತ್ತು. ಈ ಘಟನೆಯ ಬಳಿಕ ಪ್ರಾಧಿಕಾರದ ಕಾರ್ಯವೈಖರಿ, ಅಧಿಕಾರಿಗಳ ಜವಾಬ್ದಾರಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಚರ್ಚೆ ಜೋರಾಗಿತ್ತು.
ಈ ನಡುವೆ, ಬಿಟಿಡಿಎ ಅಧ್ಯಕ್ಷರ ಸಮ್ಮುಖದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳ ಕುರಿತು ದಾಖಲೆಗಳನ್ನು ನೀಡಿ ಕ್ರಮಕ್ಕೆ ಆಗ್ರಹಿಸುತ್ತಿದ್ದ ಸಂದರ್ಭದಲ್ಲಿ, ವಿಶೇಷ ಭೂಸ್ವಾಧೀನಾಧಿಕಾರಿ ಪ್ರಶಾಂತ್ ಬಾರಿಗಿಡದ ಅವರು ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಪತ್ರಕರ್ತರೊಂದಿಗೆ ಅಧಿಕಾರಿಯ ವರ್ತನೆಗೆ ಆಕ್ರೋಶ
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅಧಿಕಾರಿ ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾರ್ವಜನಿಕ ವೇದಿಕೆಯಲ್ಲಿ, ಅದೂ ಪ್ರಾಧಿಕಾರದ ಅಧ್ಯಕ್ಷರ ಎದುರಲ್ಲೇ ಪತ್ರಕರ್ತರೊಂದಿಗೆ ಈ ರೀತಿಯ ವರ್ತನೆ ತೋರಿರುವುದು ಪತ್ರಿಕಾ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮದವರನ್ನು ಗೌರವದಿಂದ ನಡೆಸಿಕೊಳ್ಳಬೇಕಾದ ಅಧಿಕಾರಿಗಳು ಈ ರೀತಿಯ ವರ್ತನೆ ತೋರಿದರೆ, ಸಾಮಾನ್ಯ ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಅಕ್ರಮ ಪ್ಲಾಟ್ ಹಂಚಿಕೆ ಕುರಿತು ತನಿಖೆಗೆ ಆಗ್ರಹ
ಬಿಟಿಡಿಎ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸುವ ಮೊದಲೇ ಕಡತ ಸಿದ್ಧಪಡಿಸುವುದು, ದಾಖಲೆಗಳಲ್ಲಿ ಅಕ್ರಮ ಬದಲಾವಣೆ ಮಾಡುವುದು, ಜಂಟಿ ವಾರಸುದಾರರಿಗೆ ಅನ್ಯಾಯವಾಗುವ ರೀತಿಯಲ್ಲಿ ಪ್ಲಾಟ್ ಹಂಚಿಕೆ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಮುಳುಗಡೆ ಸಂತ್ರಸ್ತರು ಆಗ್ರಹಿಸಿದ್ದಾರೆ.
ಪತ್ರಕರ್ತರ ಸಂಘದ ಮೌನಕ್ಕೆ ಪ್ರಶ್ನೆ
ಪತ್ರಕರ್ತರೊಬ್ಬರೊಂದಿಗೆ ಅಧಿಕಾರಿಯೊಬ್ಬರು ದರ್ಪದಿಂದ ವರ್ತಿಸಿದ್ದಾರೆ ಎಂಬ ಆರೋಪದ ನಡುವೆಯೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾವುದೇ ಕಠಿಣ ಕ್ರಮ ಅಥವಾ ಪ್ರತಿಭಟನೆ ಕೈಗೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ.
ಪತ್ರಕರ್ತರ ಮೇಲೆ ನಡೆಯುವ ಅವಮಾನಕಾರಿ ವರ್ತನೆಗಳ ವಿರುದ್ಧ ಸಂಘಟನೆಗಳು ಧ್ವನಿ ಎತ್ತಬೇಕು. ಇಲ್ಲವಾದರೆ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಪತ್ರಿಕಾ ವಲಯದ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ಮುಂದಿರುವ ಸವಾಲು
ಬಿಟಿಡಿಎಯಲ್ಲಿ ಕೇಳಿ ಬರುತ್ತಿರುವ ಅಕ್ರಮ ಆರೋಪಗಳು ಹಾಗೂ ಅಧಿಕಾರಿಗಳ ವರ್ತನೆ ಕುರಿತು ಜಿಲ್ಲಾಡಳಿತ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶ ಹೊರತರುವ ಅಗತ್ಯವಿದೆ. ಸಾರ್ವಜನಿಕರ ವಿಶ್ವಾಸ ಉಳಿಸಲು ಆಡಳಿತ ವ್ಯವಸ್ಥೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಹೆಚ್ಚುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande