
ವಿಜಯಪುರ, 01 ಜೂನ್ (ಹಿ.ಸ.) :
ಆಂಕರ್ : ಭಾರತದ ಇತಿಹಾಸದಲ್ಲಿ ರಾಜಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ 35 ವರ್ಷಗಳ ಆಡಳಿತಾವಧಿಯನ್ನು ಸುವರ್ಣ ಯುಗವೆಂದು ಕರೆಯಲಾಗುತ್ತದೆ. ಅವರ ಜನಪರ ಆಡಳಿತ, ಧಾರ್ಮಿಕ ಕಾರ್ಯಗಳು ಹಾಗೂ ಸಾಮಾಜಿಕ ಸೇವೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದ ಅಹಿಲ್ಯಾಬಾಯಿ ಹೋಳ್ಕರ್ ವೃತ್ತದಲ್ಲಿ ಆಯೋಜಿಸಿದ್ದ ರಾಜಮಾತೆ ಅಹಿಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಮಹನೀಯರ ಇತಿಹಾಸ ಮತ್ತು ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಿವಿಧ ವೃತ್ತಗಳು, ಸ್ಮಾರಕಗಳು ಹಾಗೂ ರಸ್ತೆಗಳಿಗೆ ಮಹಾಪುರುಷರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಮೂರ್ತಿ ಸ್ಥಾಪನೆ ಕುರಿತು ಮಹತ್ವದ ಘೋಷಣೆ ಮಾಡಿದ ಯತ್ನಾಳ್, “ನಗರದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಭವ್ಯ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ, ರಾಜ್ಯದಲ್ಲಿಯೇ ದಾಖಲೆಯಾಗುವ ರೀತಿಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಅನಾವರಣಗೊಳಿಸಲಾಗುವುದು. 2027ರ ಆಗಸ್ಟ್ 15ರಂದು ಈ ಐತಿಹಾಸಿಕ ಕಾರ್ಯಕ್ರಮವನ್ನು ನೆರವೇರಿಸಲಾಗುವುದು” ಎಂದು ಭರವಸೆ ನೀಡಿದರು.
ಅಹಿಲ್ಯಾಬಾಯಿ ಹೋಳ್ಕರ್ ಅವರ ಸಾಧನೆಗಳನ್ನು ಸ್ಮರಿಸಿದ ಅವರು, “ಅಹಿಲ್ಯಾಬಾಯಿ ಹೋಳ್ಕರ್ ಅವರು ಕೇವಲ ಒಬ್ಬ ಆಡಳಿತಗಾರ್ತಿ ಮಾತ್ರವಲ್ಲ, ಸಮರ್ಥ ನಾಯಕಿಯಾಗಿದ್ದರು. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ ಮಹಿಳಾ ಸೈನ್ಯವನ್ನು ನಿರ್ಮಿಸಿದರು. ಕೃಷಿ, ವ್ಯಾಪಾರ, ಶಿಕ್ಷಣ ಹಾಗೂ ಜನಕಲ್ಯಾಣಕ್ಕೆ ವಿಶೇಷ ಒತ್ತು ನೀಡಿದರು. ದೇವಸ್ಥಾನಗಳ ಜೀರ್ಣೋದ್ಧಾರ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಅವರು ಅಪ್ರತಿಮ ಸೇವೆ ಸಲ್ಲಿಸಿದರು. ಅವರ ಜನಪರ ಆಡಳಿತ ಮತ್ತು ದೈವಿಕ ಕಾರ್ಯಗಳನ್ನು ಪರಿಗಣಿಸಿ ಅವರನ್ನು ‘ಲೋಕಮಾತೆ’ ಎಂದು ಗೌರವದಿಂದ ಕರೆಯಲಾಗುತ್ತದೆ” ಎಂದು ಹೇಳಿದರು.
ಅಹಿಲ್ಯಾಬಾಯಿ ಹೋಳ್ಕರ್ ಅವರ ಇತಿಹಾಸವನ್ನು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತಗೊಳಿಸದೆ ಕರ್ನಾಟಕದಲ್ಲಿಯೂ ವ್ಯಾಪಕವಾಗಿ ಪರಿಚಯಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಯತ್ನಾಳ್, ವಿಜಯಪುರ ನಗರದಲ್ಲಿ ವಿವಿಧ ಮಹನೀಯರ ಹೆಸರಿನಲ್ಲಿ ವೃತ್ತಗಳ ನಿರ್ಮಾಣ ಹಾಗೂ ಸ್ಮಾರಕಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಮುಖಂಡರು, ಸಮಾಜ ಸೇವಕರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ರಾಹುಲ್ ಜಾಧವ, ಮಾಜಿ ಉಪಮೇಯರ್ ರಾಜೇಶ ದೇವಗಿರಿ, ಮುಖಂಡರಾದ ಅಶೋಕ ಬೆಲ್ಲದ, ರಮೇಶ ಪಡಸಲಗಿ, ರಮೇಶ ವೀರಕರ, ಸೋಮು ರಣದೇವಿ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಶಂಕರ ಬಾಡಗಂಡಿ, ಮಾಂತೇಶ ಒಣರೊಟ್ಟಿ, ಗಿರೀಶ ಕೆಳಗಡೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅಲ್ಲದೆ, ಅಹಿಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande