
ವಿಜಯಪುರ, 01 ಜೂನ್ (ಹಿ.ಸ.) :
ಆಂಕರ್ : ರಾಜಕೀಯದಲ್ಲಿ ಸರಳತೆ, ಸೌಜನ್ಯ ಮತ್ತು ಜನಪರ ಧೋರಣೆಯಿಂದ ಗುರುತಿಸಿಕೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡ ನಾಗಠಾಣ ಕ್ಷೇತ್ರದ ಶಾಸಕ ವಿಠಲ್ ಕಟಕದೊಂಡ ಅವರಿಗೆ ಇದುವರೆಗೂ ಸಚಿವ ಸ್ಥಾನ ಸಿಗದಿರುವುದು ಕಾರ್ಯಕರ್ತರು ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಪಕ್ಷದ ಸಂಘಟನೆ ಮತ್ತು ಜನಸಂಪರ್ಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರಂತಹ ನಾಯಕರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ದೊರೆಯಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ರಾಜಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿಠ್ಠಲ ಕಟಕದೊಂಡ ಅವರು ತಮ್ಮ ಸರಳ ವ್ಯಕ್ತಿತ್ವ, ಶಾಂತ ಸ್ವಭಾವ ಹಾಗೂ ಜನರೊಂದಿಗೆ ಬೆರೆಯುವ ಗುಣಗಳಿಂದ ವಿಶಿಷ್ಟ ಗುರುತನ್ನು ಪಡೆದಿದ್ದಾರೆ. ಯಾವುದೇ ವಿವಾದಗಳಿಗೆ ಆಸ್ಪದ ನೀಡದೇ, ಪಕ್ಷದ ಸಿದ್ಧಾಂತ ಮತ್ತು ಸಂಘಟನೆಯ ಬಲವರ್ಧನೆಗಾಗಿ ದುಡಿಯುವ ನಾಯಕರಲ್ಲಿ ಅವರು ಒಬ್ಬರೆಂದು ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.
ಕಾರ್ಯಕರ್ತರಲ್ಲಿ ಹೆಚ್ಚಿದ ಅಸಮಾಧಾನ
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ ಸಚಿವ ಸಂಪುಟ ರಚನೆ ಮತ್ತು ವಿವಿಧ ಹುದ್ದೆಗಳ ನೇಮಕಾತಿ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, “ವಿಠ್ಠಲ ಕಟಕದೊಂಡ ಅವರಂತಹ ನಾಯಕರಿಗೆ ಅವಕಾಶ ಯಾಕೆ ಸಿಗುತ್ತಿಲ್ಲ?” ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.
ಹಲವರು ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಮತ್ತು ಪಕ್ಷದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ನಾಯಕರಿಗೆ ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಎಂ.ಬಿ. ಪಾಟೀಲರತ್ತ ನಿರೀಕ್ಷೆಯ ನೋಟ
ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವ ಎಂ ಬಿ ಪಾಟೀಲ್ ಅವರ ಪಾತ್ರದ ಕುರಿತೂ ಚರ್ಚೆಗಳು ನಡೆಯುತ್ತಿವೆ. “ವಿಠ್ಠಲ ಕಟಕದೊಂಡ ಅವರಿಗೆ ಸೂಕ್ತ ಸ್ಥಾನಮಾನ ದೊರಕಿಸಲು ಎಂ.ಬಿ. ಪಾಟೀಲರು ಯಾಕೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ?” ಎಂಬ ಪ್ರಶ್ನೆಯನ್ನು ಕೆಲವು ಕಾರ್ಯಕರ್ತರು ಸಾರ್ವಜನಿಕವಾಗಿ ಕೇಳುತ್ತಿದ್ದಾರೆ.
ಆದರೆ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಲಭ್ಯವಾಗಿಲ್ಲ. ಪಕ್ಷದ ಆಂತರಿಕ ವಿಚಾರಗಳು ಮತ್ತು ರಾಜಕೀಯ ಸಮೀಕರಣಗಳ ಆಧಾರದ ಮೇಲೆ ನಿರ್ಧಾರಗಳು ತೆಗೆದುಕೊಳ್ಳಲಾಗುತ್ತವೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಸರಳ ರಾಜಕಾರಣಕ್ಕೆ ಸಿಗಬೇಕಿದೆ ಗೌರವ
ಇಂದಿನ ರಾಜಕೀಯದಲ್ಲಿ ಪ್ರಚಾರ, ಪ್ರಭಾವ ಮತ್ತು ಗುಂಪುಗಾರಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಸರಳತೆ ಮತ್ತು ಸಭ್ಯತೆಯನ್ನು ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡಿರುವ ನಾಯಕರಿಗೆ ಹೆಚ್ಚಿನ ಅವಕಾಶ ದೊರಕಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ವಿಠ್ಠಲ ಕಟಕದೊಂಡ ಅವರಂತಹ ನಾಯಕರು ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಯಾವುದೇ ವಿವಾದಗಳಿಲ್ಲದೆ ಪಕ್ಷದ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ಅಥವಾ ಪ್ರಮುಖ ಜವಾಬ್ದಾರಿ ನೀಡುವ ಕುರಿತು ಪಕ್ಷದ ವರಿಷ್ಠರು ಗಮನ ಹರಿಸಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande