
ಕೊಲಾರ, ೧ ಜೂನ್ (ಹಿ.ಸ.)
ಆಂಕರ್ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಕ್ಷೇತ್ರ ಸುಧಾರಣೆಯಾಗಲು ಜಿ.ನಾರಾಯಣಸ್ವಾಮಿ ಅಂಥವರು ಮಾಧ್ಯಮ ಕ್ಷೇತ್ರದಲ್ಲಿ ಇರಬೇಕು. ಜಿ.ನಾರಾಯಣಸ್ವಾಮಿ ಅವರ ಆದರ್ಶ, ಮಾರ್ಗದರ್ಶನಗಳನ್ನು ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಜನರಿಗೆ ತಲುಪುವ ರೀತಿಯಲ್ಲಿ ಆದಾಗ ವ್ಯವಸ್ಥೆಗಳಲ್ಲಿ ಸುಧಾರಣೆಯ ಬದಲಾವಣೆಗಳು ಕಾಣಲು ಸಾಧ್ಯ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಜಿ.ನಾರಾಯಣಸ್ವಾಮಿಯವರ ಕುಟುಂಬಸ್ಥರು ಜಿಲ್ಲಾ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಜಿ.ನಾರಾಯಣಸ್ವಾಮಿಯವರ ಜನ್ಮ ಶತಮಾನೋತ್ಸದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಜಿ.ನಾರಾಯಣಸ್ವಾಮಿಯವರಂಥ ಸಾಧಕರ ನೆನಪುಗಳನ್ನು ಎಂದಿಗೂ ಮರೆಯ ಬಾರದು ಇಂಥ ಸಾಧಕರ ನೆನಪಿನಿಂದ ಮತ್ತೊಬ್ಬ ಸಾಧಕರು ರೂಪುಗೊಳ್ಳಲು ಸಾಧ್ಯ.ಇಂಥಹ ಸಾಧಕರ ಕಾರ್ಯಕ್ರಮಗಳು ಮತ್ತೊಬ್ಬ ಸಾಧಕರಾಗಲು ಪ್ರೇರಣೆ ಸ್ಪೂರ್ತಿದಾಯಕವಾಗಲಿದೆ. ಶತಮಾನೋತ್ಸವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದು ಮಾಧ್ಯಮ ಕ್ಷೇತ್ರ ಸುಧಾರಣೆಯಾಗಲು ಪೂರಕವಾಗಲಿದೆ ಎಂದರು.
ಜಿ.ನಾರಾಯಣಸ್ವಾಮಿಯವರು ನೇರ ದಿಟ್ಟನುಡಿಗಳು ನಿಷ್ಟೂರವಾದ ನಡೆಯುಳ್ಳವರಾಗಿದ್ದರು. ಅವರ ಆದರ್ಶಗಳು ಮಾರ್ಗದರ್ಶನಗಳು ಮಾದ್ಯಮದವರಿಗೆ ಸ್ಪೂರ್ತಿದಾಯಕವಾಗಿದೆ ಎಂದ ಅವರು ನಾರಾಯಣಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತ ಸೇವಾದಳ ಅಧ್ಯಕ್ಷರಾಗಿದ್ದವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಟ್ಟಾಭಿರಾಮನ್, ಎಂ.ವಿ.ಕೃಷ್ಣಪ್ಪನವರ ಒಡನಾಡಿಗಳಾಗಿ ಮಾರ್ಗದರ್ಶಕರಾಗಿದ್ದರು ಅವರ ಸಲಹೆ ಮೇರೆಗೆ ಹೈನುಗಾರಿಕೆ ಅಭಿವೃದ್ದಿಯಿಂದಾಗಿ ಅವಿಭಜಿತ ಜಿಲ್ಲೆಯ ರೈತರ ಜೀವನಾಡಿಯಾಗಿ ರೂಪಿಸಿ ಬದುಕು ಕಟ್ಟಿಕೊಡಲು ಪ್ರೇರಕರಾಗಿದ್ದವರು ಎಂದರು
ನಾನು ಜನತಾದಳ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ನಂತರದಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಹಾಗೂ ಸಭಾಪತಿಯಾಗಿದ್ದಾಗಲು ಅನೇಕ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಮಾರ್ಗದರ್ಶಕರಾಗಿದ್ದರು. ಎಂ.ವಿ.ಕೆ. ಪುತ್ರ ಆಶೋಕ್ ಅವರನ್ನು ಎತ್ತಿ ಆಡಿಸಿ ಬೆಳೆಸಿದರು ಗೋಲ್ಡನ್ ವ್ಯಾಲಿ ಎಜುಕೇಷನ್ ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಿ.ನಾರಾಯಣಸ್ವಾಮಿ ಅವರು ಸರ್ಕಾರದ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಅವರ ಲೋಪ ದೋಷಗಳನ್ನು ನಿಷ್ಟೂರವಾಗಿ ಎತ್ತಿ ಹಿಡಿದು ಸಮರ್ಪವಾದ ಆಡಳಿತ ನೀಡುವಂತೆ ಸೂಚಿಸುತ್ತಿದ್ದ ಸಂದರ್ಭಗಳನ್ನು ಮೆಲುಕು ಹಾಕಿದರು.
ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ನಾರಾಯಣಸ್ವಾಮಿಯವರ ಮಾತಿನಲ್ಲಿ ಕಟ್ಟುಪಾಡುಗಳಿದ್ದವು ಅವರ ಬಳಿ ಮಾತನಾಡಲು ಅಪರ ಜ್ಞಾನ ಇರಬೇಕಾಗಿತ್ತು. ನಾರಾಯಣಸ್ವಾಮಿ ಅವರಲ್ಲಿ ಸ್ವಾರ್ಥತೆ ಎಂಬುವುದು ಇರಲಿಲ್ಲ ತಮ್ಮ ಮಗನ ಕೆಲಸಕ್ಕೆ ಶಿಫಾರಸ್ಸು ಮಾಡದೆ ವಾರ್ತಾಇಲಾಖೆಯಲ್ಲಿನ ಕೆಲಸದ ಸಂದರ್ಶನದಲ್ಲಿ ಅ.ನಾ.ಪ್ರಕಾಶ್ ಅವರಿಗೆ ವಯಸ್ಸಾಗುತ್ತಿದೆ ಎಂಬ ಕಾರಣಕ್ಕೆ ಅವರಿಗೆ ಶಿಫಾರಸ್ಸು ಮಾಡಿ ಕೆಲಸ ಸಿಗುವಂತೆ ಮಾಡಿದಂತವರು ಹಾಗೂ ಸ್ವಾಭಿಮಾನಿಗಳು ಆಗಿದ್ದವರು ಎಂದರು.
ಪತ್ರಿಕೋದ್ಯಮದಲ್ಲಿ ಕಿರಿಯರಿಗೆ ಆಶಾಕಿರಣ ಮತ್ತು ಆದರ್ಶಪ್ರಿಯರಾಗಿದ್ದ ಪ್ರಮಾಣಿಕರು ಎಂದ ಅವರು ಸಚಿವರು ತಮ್ಮ ಹೆಸರಿಗೆ ಮಾಡಿಕೊಟ್ಟಿದ್ದ ಆಸ್ತಿಯನ್ನು ಸಚಿವರ ನಿಧನದ ನಂತರ ತಮ್ಮ ಹೆಸರಿನಲ್ಲಿ ಮಾಡಿ ಕೊಟ್ಟಿದ್ದ ಆಸ್ತಿಯನ್ನು ಅವರ ಕುಟುಂಬದವರಿಗೆ ಮಾಡಿಕೊಟ್ಟಂತ ಪ್ರಮಾಣಿಕರಾಗಿದ್ದವರು ಎಂದು ನೆನಪಿಸಿದರು.
ತಮ್ಮ ಮನಸಾಕ್ಷಿಗೆ ವಿರುದ್ದವಾಗಿ ಎಂದು ನಡೆದುಕೊಳ್ಳತ್ತಿರಲಿಲ್ಲ. ಯಾವೂದೇ ರೀತಿ ಆಸೆ ಅಮಿಷಗಳಿರಲಿಲ್ಲ ಪತ್ರಿಕೋದ್ಯಮವನ್ನೆ ತಮ್ಮ ಆಸ್ತಿಯನ್ನಾಗಿ ಪರಿಗಣಿಸಿಕೊಂಡು ಡಿ.ವಿ.ಜಿ. ಅವರ ಆದರ್ಶಗಳನ್ನು ಪಾಲನೆ ಮಾಡಿಕೊಂಡು ಬಂದ ಆದರ್ಶ ವ್ಯಕ್ತಿತ್ವದ ಮೇರು ಪರ್ವತ ಡಿ.ವಿ.ಜಿ. ಅವರ ಗುಣಗಳನ್ನು ನಾರಾಯಣಸ್ವಾಮಿ ಅವರಲ್ಲಿ ಕಾಣಬಹುದಾಗಿತ್ತು.
ಯಾವೂದೇ ಪ್ರತಿಫಲ ಇಲ್ಲದೆ ಜೀವನದಲ್ಲಿ ಮುಕ್ತಿ ಕಂಡವರು ನಾರಾಯಣಸ್ವಾಮಿಯವರ ಆದರ್ಶಗಳನ್ನು ಪತ್ರಕರ್ತರು ಅಳವಡಿಸಿ ಕೊಂಡಾಗ ಮಾತ್ರ ಪತ್ರಿಕೋದ್ಯಮದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಕಿವಿ ಮಾತು ತಿಳಿಸಿದರು.
ಕೋಲಾರ ಪತ್ರಿಕೆಯ ವಾಣಿ ಪ್ರಹ್ಲಾದರಾವ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ನಾರಾಯಣಸ್ವಾಮಿಯವರ ಬಗ್ಗೆ ನಾವು ಮಾತನಾಡುವುದು ಸೂರ್ಯನಿಗೆ ಹಣತೆಯನ್ನು ಬೆಳಗಿದಂತೆ ಎಂದ ಅವರು ನಾರಾಯಣಸ್ವಾಮಿ ಅವರು ಉತ್ತಮವಾದ ವ್ಯಕ್ತಿತ್ವ ಹೊಂದಿ ಪತ್ರಿಕಾಧರ್ಮವನ್ನು ಪಾಲಿಸಿಕೊಂಡು ಸಮಾಜ ಮುಖಿಯಾಗಿ ಸೇವೆ ಸಲ್ಲಿಸುವ ಮೂಲಕ ನಡೆದಾಡುವ ವಿಶ್ವಕೋಶವಾಗಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಳಿಯೂ ಗೌರವದಿಂದ ಕಾಣುವ ಮೂಲಕ ಸಮಾಜಿಕ ನ್ಯಾಯ ದೊರಕಿಸಿ ಕೊಡುತ್ತಿದ್ದರು. ಚಿಕ್ಕವರಾದರೂ ಅವರ ಬಳಿ ಸ್ನೇಹಮಯಿಯಾಗಿ ನಡೆದು ಕೊಳ್ಳುತ್ತಿದ್ದರು ಎಂದರು.
ಜಿ.ನಾರಾಯಣಸ್ವಾಮಿ ಅವರೊಂದಿಗೆ ಕೆ.ಪ್ರಹ್ಲಾದರಾವ್ ಅವರೊಂದಿಗೆ ಹೆಚ್ಚಿನ ಒಡನಾಟವಿತ್ತು ತಮ್ಮ ಪತ್ರಿಕೆಗೆ ಅಗಮಿಸಿ ಪ್ರಹ್ಲಾದರಾವ್ ಅವರೊಂದಿಗೆ ಜಿಲ್ಲಾ ಕಚೇರಿ ಸೇರಿದಂತೆ ವಿವಿಧಡೆ ಭೇಟಿ ನೀಡಿ ಸುದ್ದಿಗಳನ್ನು ಸಂಗ್ರಹಿಸುತ್ತಿದ್ದರು. ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದರು. ನಮ್ಮ ಪತ್ರಿಕೆಗೆ ಮಾರ್ಗದರ್ಶನ ನೀಡುತ್ತಿದ್ದರು ಪತ್ರಿಕೋದ್ಯಮಿಗಳಿಗೆ ಆದರ್ಶವಾಗಿದ್ದರು. ಜಿ.ನಾರಾಯಣಸ್ವಾಮಿ ಅವರ ಆತ್ಮಚರಿತ್ರೆಗೆ ಸಂಬಂಧಿಸಿದಂತೆ ಪುಸ್ತಕವನ್ನು ರಚಿಸುವ ಮೂಲಕ ಪತ್ರಕರ್ತರಿಗೆ ಮಾರ್ಗದರ್ಶನ ನೀಡುವಂತಾಗ ಬೇಕು ಇದರಿಂದ ಪತ್ರಿಕೋದ್ಯಮದಲ್ಲಿ ತಕ್ಕಮಟ್ಟಿಗಾದರೂ ಸುಧಾರಣೆಯಾಗ ಬಹುದೆಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಆಶೋಕ್ ಕೃಷ್ಣಪ್ಪ ಮಾತನಾಡಿ, ಜಿ.ನಾರಾಯಣಸ್ವಾಮಿ ಅವರ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾಜ್ಯ ಸಂಬಂಧವಿದೆ. ನನ್ನನ್ನು ಎತ್ತಿ ಆಡಿಸಿದ ಜಿ.ನಾರಾಯಣಸ್ವಾಮಿಯವರು, ನಮ್ಮ ತಂದೆಯ ಜೂತೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದವರು ಎಂದರು.
ನಮ್ಮ ತಂದೆಯವರು ಸಚಿರಾಗಿದ್ದ ಸಂದರ್ಭಧಲ್ಲಿ ಮಾರ್ಗದರ್ಶಕರಾಗಿದ್ದವರು ನಮ್ಮ ತಂದೆ ಕಾಲವಾದ ನಂತರ ತಂದೆ ಸ್ಥಾನದಲ್ಲಿ ನಿಂತು ನಮ್ಮ ಕುಟುಂಬಕ್ಕೆ ಮಾರ್ಗದರ್ಶನ ನೀಡಿದರು. ಅವರ ಸಲಹೆ ಮೇರೆಗೆ ಗೋಲ್ಡನ್ ವ್ಯಾಲಿ ಟ್ರಸ್ಟ್ ರಚಿಸಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಪ್ರೇರಕರಾಗಿ ರಾಜ್ಯ ಮಾಜಿ ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯನವರ ಅಳಿಯ ಕಾಂಮ್ರೆಡ್ ಜನರಲ್ ತಿಮ್ಮಯ್ಯನವರನ್ನು ಟ್ರಸ್ಟಿಯನ್ನಾಗಿ ಮಾಡಿದರು, ಬಂಗಾರ ತಿರುಪತಿ ದೇವಾಲಯದ ಧರ್ಮದರ್ಶಿಗಳಾಗಿ, ಎಸ್.ಸಿ.ಎಸ್.ಟಿ. ಹಾಸ್ಟೆಲ್ ಉಸ್ತುವಾರಿಗಳಾಗಿ. ಗೋಲ್ಡಾನ್ ವ್ಯಾಲಿ ಟ್ರಸ್ಟಿಗಳಾಗಿ ಕಾರ್ಯನಿರ್ವಹಿಸಿದರೆಂದು ನೆನಪಿಸಿ ಕೊಂಡರು.
ವಾರ್ತಾಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೆ.ಎಸ್.ರಾಮಚಂದ್ರ ಅವರು ಕೋಲಾರದಲ್ಲಿ ವಾರ್ತಾಧಿಕಾರಿಯಾಗಿದ್ದ ಸಂದರ್ಭದಲ್ಲಿ ತಮಗೆ ಮಾರ್ಗಸೂಚಕರಾಗಿದ್ದರು. ವಾರ್ತಇಲಾಖೆ ಕಚೇರಿಗೆ ವ್ಯವಸ್ಥೆ ಕಲ್ಪಸಿ ಕೊಟ್ಟಿದ್ದರು. ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದರು. ಸ್ವಾಭಿಮಾನಿಗಳಾಗುವ ಶಕ್ತಿಯನ್ನು ಬೆಳೆಸುತ್ತಿದ್ದರು ವಿವೇಕನಂದರ ಸಂದೇಶಗಳನ್ನು ಪಾಲನೆ ಮಾಡುತ್ತಿದ್ದರು. ಯಾವ ರಾಜಕಾರಣಿಯಾಗಲಿ ಅಧಿಕಾರಿಗಳಾಗಲಿ ಯಾವೂದೇ ಮುಲಾಜಿಲ್ಲದೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡೆಸುತ್ತಿದ್ದರು ಕಿಂಚತ್ತು ಹಿಂಜರಿಕೆ ಎಂಬುವುದು ಅವರಲ್ಲಿ ಎಂದೂ ಕಾಣಲಿಲ್ಲ. ಅವರ ನಡೆ ನುಡಿಗಳಲ್ಲಿ ಮುಕ್ತವಾಗಿ ಹಾಗೂ ಪಾರದರ್ಶಕವಾಗಿದ್ದವು ಎಂದು ಕೆಲವು ಸಂದರ್ಭಗಳನ್ನು ಮೆಲುಕು ಹಾಕಿದರು.
ಹಿರಿಯ ಪತ್ರಕರ್ತ ಬಿ.ವಿ.ಗೋಪಿನಾಥ್ ಮಾತನಾಡಿ ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಮೂಲ ಸ್ಥಾಪಕರಾದ ಜಿ.ನಾರಾಯಣಸ್ವಾಮಿಯವರು ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆಯಾಗಿ ಅಸ್ಥಿತ್ವವಾಗಿದ್ದರು. ಕೇಂದ್ರ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪನವರ ಮಾರ್ಗದರ್ಶಕರಾಗಿ ಕೋಲಾರದಲ್ಲಿ ಹೈನುಗಾರಿಕೆ ಉದ್ಯಮ ಕ್ಷೀರಕಾಂತ್ರಿಗೆ ಪ್ರೇರಣೆಯಾಗಿ ರೈತರ ಜೀವನಾಡಿಯಾದರೂ ಎಂದರೆ ತಪ್ಪಿಲ್ಲ ಎಂದರು.
ರಾಜಕಾರಣಿಗಳು ನಾರಾಯಣಸ್ವಾಮಿಯವರನ್ನು ಪತ್ರಿಕಾಗೋಷ್ಠಿಗೆ ಆಹ್ವಾನಿಸುವ ಮುನ್ನ ಹೋಮ್ ವರ್ಕ್ ಮಾಡಿಕೊಂಡು ಬರಬೇಕಾಗಿತ್ತು.ನೇರ ನಿಷ್ಟೂರತೆ ದಿಟ್ಟನುಡಿ ನಡೆಗಳ ವ್ಯಕ್ತಿತ್ವಗಳು ಪತ್ರಕರ್ತರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ ಎಂದ ಅವರು ನಾರಾಯಣಸ್ವಾಮಿಯವರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು ನಾರಾಯಣಸ್ವಾಮಿಯವರ ಕೊಡುಗೆಯು ನಮಗೆಲ್ಲಾ ಆಶ್ರಯಾವಾಗಿದೆ ಎಂದು ಬಣ್ಣಿಸಿದರು. ಜನಪದ ಕಲಾವಿದ ಪಿಚ್ಚಳ್ಳಿಯವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಹಾಡುಗಳ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.
ಇದೇ ಸಂದರ್ಭದಲ್ಲಿ ಜಿ.ನಾರಾಯಣಸ್ವಾಮಿ ಅವರ ಹೆಸರಿನ ಅಂಚೆ ಚೀಟಿ ಮತ್ತು ಅಂಚೆ ಕವರ್ ಬಿಡುಗಡೆ ಮಾಡಲಾಯಿತು. ಅಂಚಿ ಇಲಾಖೆಯ ಜಗನ್ನಾಥ ಮಣಿಯವರನ್ನು ಸನ್ಮಾನಿಸಲಾಯಿತು.
ಜಿ.ನಾರಾಯಣಸ್ವಾಮಿಯವರ ಪುತ್ರ ಹಿರಿಯ ಪತ್ರಕರ್ತ ಜಗನ್ನಾಥ್ ಪ್ರಕಾಶ್ ಅವರು ವೇದಿಕೆ ಮೇಲಿನ ಗಣ್ಯರಿಗೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ವಿ.ವೆಂಕಟೇಶ್, ವಾರ್ತಇಲಾಖೆಯ ನಿವೃತ್ತ ಅಧಿಕಾರಿ ಅ.ನಾ.ಪ್ರಹ್ಲಾದರಾವ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ರಾಜ್ಯ ಪತ್ರಕರ್ತರ ಸಂಘದ ಸದಸ್ಯ ವಿ.ಮುನಿರಾಜು, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್ ಹಿರಿಯ ಪತ್ರಕರ್ತ ವಿಶ್ವಕುಂದಾಪುರ, ಅ.ಕೃ.ಸೋಮಶೇಖರ್, ಅಂಚೆ ಅಶ್ವಥ್, ಕೆ.ವಿ. ಸುರೇಶ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್