
ಗದಗ, 01 ಜೂನ್ (ಹಿ.ಸ.) :
ಆ್ಯಂಕರ್ : ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಹೊಂದಿರುತ್ತಾರೆ. ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಗಣ್ಯ ಉದ್ಯಮಿ ಈಶ್ವರಯ್ಯ ಹಿರೇಮಠ ಹೇಳಿದರು.
ನಗರದ ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಗುಲಾಬಿ ಹೂ ನೀಡಿ, ಸಿಹಿ ತಿನ್ನಿಸುವ ಮೂಲಕ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಕ್ಕಳಲ್ಲಿ ಸಂತಸ ಮೂಡಿಸಿದರು.
ವಿಶೇಷ ಚೇತನ ಮಕ್ಕಳು ದೈವ ಸ್ವರೂಪಿಗಳು. ಅವರಲ್ಲಿರುವ ಪ್ರತಿಭೆ, ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಗುರುತಿಸಿ ಸಮಾಜದ ಮುಂದೆ ತರುವ ಕೆಲಸ ಅತ್ಯಂತ ಮಹತ್ವದ್ದಾಗಿದೆ. ಇಂತಹ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿಸ್ವಾರ್ಥ ಸೇವಾಭಾವದಿಂದ ದುಡಿಯುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಸಾಮಾನ್ಯ ಮಕ್ಕಳಂತೆ ವಿಶೇಷ ಚೇತನ ಮಕ್ಕಳಿಗೂ ಶಿಕ್ಷಣ, ತರಬೇತಿ, ಆರೋಗ್ಯ ಹಾಗೂ ಸಾಮಾಜಿಕ ಗೌರವದ ಬದುಕು ದೊರಕಬೇಕು. ಸಮಾಜದಲ್ಲಿ ಯಾರೂ ಕಡೆಗಣಿಸಲ್ಪಡಬಾರದು. ಈ ದೃಷ್ಟಿಯಿಂದ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗುತ್ತಿರುವುದು ಸಂತಸದ ಸಂಗತಿ ಎಂದರು.
ಇಲ್ಲಿನ ಮಕ್ಕಳು ನಮ್ಮಂತೆಯೇ ಸ್ವಾವಲಂಬಿಗಳಾಗಿ ಬೆಳೆಯಬೇಕು. ತಮ್ಮ ಜೀವನವನ್ನು ಗೌರವಯುತವಾಗಿ ನಡೆಸುವಂತಾಗಲು ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ ಹಾಗೂ ಆತ್ಮವಿಶ್ವಾಸದ ಬೆಳವಣಿಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಈಶ್ವರಯ್ಯ ಹಿರೇಮಠ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರು ಮಾತನಾಡಿ, ವಿಶ್ವ ಕಲ್ಯಾಣ ಸಂಸ್ಥೆಯು ನಡೆದು ಬಂದ ಹಾದಿ, ಸಂಸ್ಥೆ ಎದುರಿಸಿದ ಸವಾಲುಗಳು ಹಾಗೂ ಸಾಧನೆಗಳನ್ನು ವಿವರಿಸಿದರು. ವಿಶೇಷ ಅಗತ್ಯವುಳ್ಳ ಮಕ್ಕಳ ಶೈಕ್ಷಣಿಕ, ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಬೆಳವಣಿಗೆಗಾಗಿ ಸಂಸ್ಥೆ ನಿರಂತರವಾಗಿ ಹಲವು ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ವಿಶೇಷ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಉದ್ದೇಶದಿಂದ ವಿವಿಧ ತರಬೇತಿ ಕಾರ್ಯಕ್ರಮಗಳು, ಜೀವನ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳು ಹಾಗೂ ಪೋಷಕರಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶೇಷ ಚೇತನ ಮಕ್ಕಳು ಆತ್ಮನಿರ್ಭರರಾಗಲು ಹಾಗೂ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಅನೇಕ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾದೇವಯ್ಯ ಹಿರೇಮಠ, ವಿಶೇಷ ಅಗತ್ಯವುಳ್ಳ ಮಕ್ಕಳು, ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಆರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಆತ್ಮೀಯ ಸ್ವಾಗತ ಕೋರಲಾಗಿದ್ದು, ಹೂವು, ಸಿಹಿ ಹಾಗೂ ಶುಭಾಶಯಗಳ ಮೂಲಕ ಮಕ್ಕಳಲ್ಲಿ ಹೊಸ ಶೈಕ್ಷಣಿಕ ವರ್ಷದ ಸಂಭ್ರಮವನ್ನು ಹೆಚ್ಚಿಸಲಾಯಿತು. ಕಾರ್ಯಕ್ರಮವು ಉತ್ಸಾಹಭರಿತ ಹಾಗೂ ಅರ್ಥಪೂರ್ಣವಾಗಿ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / lalita MP