
ಬಳ್ಳಾರಿ, 01 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಮೂಲದಲ್ಲಿಯೇ 4 ಭಾಗಗಳಾಗಿ ಕಸ ವಿಂಗಡಿಸಬೇಕು. ಸಾರ್ವಜನಿಕರು ಹಾಗೂ ಉದ್ದಿಮೆದಾರರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026ರ ಅನ್ವಯ, ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕರು ತಮ್ಮ ಮನೆಯಲ್ಲಿ ಅಥವಾ ಸಂಸ್ಥೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ, ವಿಶೇಷ ಕಾಳಜಿಯ ತ್ಯಾಜ್ಯ ಎಂದು ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ಪಾಲಿಕೆಯ ವಾಹನಕ್ಕೆ ನೀಡಬೇಕು.
ಸ್ಯಾನಿಟರಿ ತ್ಯಾಜ್ಯದ ವಿಲೇವಾರಿ :
ಬಳಸಿದ ಸ್ಯಾನಿಟರಿ ಪ್ಯಾಡ್ಗಳು ಮತ್ತು ಡೈಪರ್ಗಳನ್ನು ಆಯಾ ಉತ್ಪನ್ನಗಳ ತಯಾರಕರು ಅಥವಾ ಬ್ರ್ಯಾಂಡ್ ಮಾಲೀಕರು ಒದಗಿಸಿದ ಚೀಲಗಳಲ್ಲಿ ಅಥವಾ ಹಳೆ ಪೇಪರ್ಗಳಲ್ಲಿ ಸುರಕ್ಷಿತವಾಗಿ ಸುತ್ತಿ, ಪ್ರತ್ಯೇಕವಾಗಿ ಮಹಾನಗರ ಪಾಲಿಕೆಯ ವಾಹನಕ್ಕೆ ನೀಡಬೇಕು. ಬಯೋ-ಮೆಡಿಕಲ್ (ಜೈವಿಕ ವೈದ್ಯಕೀಯ) ತ್ಯಾಜ್ಯವನ್ನು ಯಾವುದೇ ಕಾರಣಕ್ಕೂ ಇತರ ಕಸದೊಂದಿಗೆ ಮಿಶ್ರಣ ಮಾಡುವಂತಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ನಿಷೇಧ :
ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಬೀದಿಗಳಲ್ಲಿ, ತಮ್ಮ ಆವರಣದ ಹೊರಗೆ, ಮುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಚರಂಡಿಗಳಲ್ಲಿ ಎಸೆಯುವುದು ಮತ್ತು ಸುಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರತಿಯೊಬ್ಬ ಉದ್ದಿಮೆದಾರರು ಮತ್ತು ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರದ ಸ್ಥಳದಲ್ಲಿ ಉತ್ಪತ್ತಿಯಾಗುವ ಆಹಾರ ತ್ಯಾಜ್ಯ ಬಿಸಾಡಬಹುದಾದ ತಟ್ಟೆ, ಕಪ್, ಡಬ್ಬಿ, ಹೊದಿಕೆಗಳು, ತೆಂಗಿನ ಚಿಪ್ಪು, ಉಳಿದ ಆಹಾರ ತರಕಾರಿ, ಹಣ್ಣು ಹಾಗೂ ಇತ್ಯಾದಿ ತ್ಯಾಜ್ಯಗಳನ್ನು ಡಸ್ಟ್ಬಿನ್ ಇಟ್ಟುಕೊಂಡು ಕಸ ಸಂಗ್ರಹಿಸಿ ಪಾಲಿಕೆ ವಾಹನಕ್ಕೆ ನೀಡಬೇಕು. ಪಾಲಿಕೆಯ ಘನತ್ಯಾಜ್ಯ ನಿಯಮಾವಳಿಗಳ ಪ್ರಕಾರ ನಿಗದಿಪಡಿಸಿದ ಬಳಕೆದಾರರ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.
ಸಾರ್ವಜನಿಕ ಸಮಾರಂಭಗಳಿಗೆ ಮುಂಚಿತವಾಗಿ ಅನುಮತಿ ಕಡ್ಡಾಯ :
100 ಕ್ಕಿಂತ ಹೆಚ್ಚು ಜನರು ಸೇರುವ ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭಗಳಿದ್ದಲ್ಲಿ, ಕನಿಷ್ಠ 3 ಕೆಲಸದ ದಿನಗಳ ಮುಂಚಿತವಾಗಿ ಮಹಾನಗರ ಪಾಲಿಕೆಗೆ ಮಾಹಿತಿ ನೀಡಬೇಕು. ನಿಗದಿತ ಶುಲ್ಕವನ್ನು ಪಾವತಿಸಿ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಈ ಸಮಾರಂಭಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ವಿಂಗಡಿಸಿ ಪಾಲಿಕೆಯ ವಾಹನಕ್ಕೆ ಹಸ್ತಾಂತರಿಸಬೇಕು.
ಬೃಹತ್ ಘನತ್ಯಾಜ್ಯ ಉತ್ಪಾದಕರಿಗೆ ನಿಯಮಗಳು :
5000 ಚ.ಮೀ. ಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಅಥವಾ ಪ್ರತಿದಿನ 100 ಕೆ.ಜಿ. ಗಿಂತಲೂ ಹೆಚ್ಚಿನ ತ್ಯಾಜ್ಯ ಉತ್ಪಾದಿಸುವ ಎಲ್ಲಾ ಗೇಟೆಡ್ ಸಮುದಾಯಗಳು, ಸಂಸ್ಥೆಗಳು, ನಿವಾಸಿ ಕಲ್ಯಾಣ ಸಂಘಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ವಸತಿ ಶಾಲೆಗಳು ಮತ್ತು ಸರ್ಕಾರಿ-ಖಾಸಗಿ ಆಸ್ಪತ್ರೆಗಳು ತಮ್ಮ ಆವರಣದಲ್ಲೇ ಗೊಬ್ಬರ ಅಥವಾ ಬಯೋ-ಮೀಥನೇಷನ್ ಮಾಡುವ ಮೂಲಕ ಹಸಿ ಕಸವನ್ನು ಸಂಸ್ಕರಿಸಬೇಕು. ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ತ್ಯಾಜ್ಯ ಸಂಗ್ರಹಿಸುವ ವ್ಯಕ್ತಿಗಳಿಗೆ ಹಸ್ತಾಂತರಿಸಬೇಕು.
ಸಾರ್ವಜನಿಕರು ಪರಿಸರ ಸಂರಕ್ಷಣೆ ಮತ್ತು ನಗರದ ಸ್ವಚ್ಛತೆಯ ಹಿತದೃಷ್ಟಿಯಿಂದ ಪಾಲಿಕೆಯೊಂದಿಗೆ ಸಹಕರಿಸಿ, ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್