ಮಿಂಚೇರಿ ಮಸೀದಿ ವಿವಾದ, ವಕ್ಫ್ ಆಸ್ತಿ ; ಪ್ರತಿಭಟನೆ, ಮನವಿ
ಮಂಡಳಿ
ಮಿಂಚೇರಿ ಮಸೀದಿ ವಿವಾದ - ವಕ್ಫ್ ಆಸ್ತಿ ; ಪ್ರತಿಭಟನೆ - ಮನವಿ


ಮಿಂಚೇರಿ ಮಸೀದಿ ವಿವಾದ - ವಕ್ಫ್ ಆಸ್ತಿ ; ಪ್ರತಿಭಟನೆ - ಮನವಿ


ಬಳ್ಳಾರಿ, 01 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಿರುವ ಬಳ್ಳಾರಿ ತಾಲೂಕಿನ ಮಿಂಚೇರಿ ಗ್ರಾಮದ ಸರ್ವೇ ನಂ. 88ರಲ್ಲಿ ಜುಮ್ಮಾ ಮಸೀದಿಯ ನಾಲ್ಕು ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಯ ಹೆಸರಲ್ಲಿ ಪರಿಗಣಿಸದೇ, ಈ ಭೂಮಿಯ ಪರಿಹಾರದ ಮೊತ್ತವನ್ನು ಮಸೀದಿಯ ಅಭಿವೃದ್ಧಿಗೇ ಮೀಸಲು ಮಾಡಬೇಕು ಎಂದು ಕೋರಿ ಮಿಂಚೇರಿ ಗ್ರಾಮಸ್ಥರು ಮತ್ತು ವಕ್ಫ್ ಮಂಡಳಿ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾಗಿರುವ ಉಮರ್ ರಿಜ್ವಾನ್ ಅವರು, ಮಿಂಚೇರಿ ಗ್ರಾಮದ ಜುಮ್ಮಾ ಮಸೀದಿಯ ನಾಲ್ಕು ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರ ಅಪಾರಲ್ ಪಾರ್ಕ್ ಗೆ ಸ್ವಾಧೀನ ಮಾಡಿಕೊಂಡಿದೆ. ಆದರೆ, ಈ ಭೂಮಿಯ ಪರಿಹಾರವನ್ನು ವಿತರಣೆಗಾಗಿ ಕೆಐಡಿಬಿ ಅಧಿಕಾರಿಗಳು ಮುಗ್ದುಂಸಾಬ್ ಅವರ ಹೆಸರನ್ನು ಪರಿಗಣಿಸಿದೆ. ಆದರೆ, ಈ ಮಸೀದಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಗೆಜೆಟ್ನಲ್ಲಿ

ವಕ್ಫ್ ಆಸ್ತಿಯಾಗಿ ಪ್ರಕಟವಾಗಿದೆ. ಆದರೆ, ಈಗ ಪರಿಹಾರಕ್ಕಾಗಿ ಖಾಸಗಿ ವ್ಯಕ್ತಿಗಳ ಹೆಸರನ್ನು ನಮೂದಿಸಿರುವುದು ಸರಿಯಲ್ಲ ಎಂದರು.

ಮಿಂಚೇರಿ ಹಾಗೂ ಸುತ್ತಲಿನ ಮುಸ್ಲಿಂ ಕುಟುಂಬಗಳು ದೇಣಿಗೆ ಸಂಗ್ರಹ ಮಾಡಿ 1993ರಲ್ಲಿ ಈ ನಾಲ್ಕು ಎಕರೆ ಭೂಮಿಯನ್ನು ತಾಂತ್ರಿಕ ಕಾರಣಗಳಿಗಾಗಿ ಹಿರಿಯರಾದ ಮುಗ್ದುಂಸಾಬ್ ಅವರ ಹೆಸರಲ್ಲಿ ಖರೀದಿ ಮಾಡಿದ್ದರು. ನಂತರದ ದಿನಗಳಲ್ಲಿ ಈ ಭೂಮಿಯಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ಮುಗ್ದುಂಸಾಬ್ ಅವರು ಕೂಡ ಈ ಆಸ್ತಿಯನ್ನು ವಕ್ಫ್ಬೋರ್ಡ್ಗೆ ಬರೆದುಕೊಟ್ಟಿದ್ದಾರೆ, ಆದರೆ, ಮಾಲೀಕತ್ವ ಹಸ್ತಾಂತರಿಸಿಲ್ಲ. ಈಗ, ಮುಗ್ದುಂಸಾಬ್ ಅವರು ಪರಿಹಾರದ ಮೊತ್ತ 1 ಕೋಟಿ 60 ಲಕ್ಷ ರೂಪಾಯಿಯನ್ನು ತಮ್ಮ ಹೆಸರಲ್ಲಿ ಪಡೆದು, ಬೇರೆ ಕಡೆ ಭೂಮಿಯನ್ನು ಖರೀದಿಸಿ ನೀಡುವುದಾಗಿ ಹೇಳುತ್ತಿದ್ದಾರೆ. ವಿವಾದವು ನ್ಯಾಯಾಲಯದಲ್ಲಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ಧಾರೆ.

ವಕ್ಫ್ಬೋರ್ಡ್ನವರು ಈ ವಿವಾದದ ಕುರಿತು ನ್ಯಾಯಾಲಯದಲ್ಲಿ ಏಕಾಏಕಿ ವಕೀಲರನ್ನು ಬದಲಾವಣೆ ಮಾಡಿ, ವಕ್ಫ್ಬೋರ್ಡ್ ವಿರುದ್ಧ ವಾದ ಮಾಡುತ್ತಿರುವ ನಯೀಂ ಎನ್ನುವವರನ್ನು ನೇಮಕ ಮಾಡಿದೆ. ಇದು ವಕ್ಫ್ ಬೋರ್ಡ್ನ ತಪ್ಪು ನಿರ್ಧಾರವಾಗಿದೆ. ಈ ಕುರಿತು 2022ರಿಂದ ಗ್ರಾಮಸ್ಥರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು, ವಕ್ಫ್ ಬೋರ್ಡ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿಚಾರಣೆ ನಡೆಸಬೇಕು. ಸ್ಥಳದ ಮಾಲೀಕತ್ವದ ವಾಸ್ತವಾಂಶಗಳನ್ನು ಪರಿಶೀಲಿಸಿ ನ್ಯಾಯಯುತ ನಿರ್ಧಾರ ಕೈಗೊಂಡು ಮಸೀದಿಯ ಆಸ್ತಿಗೆ ಕಾನೂನುಬದ್ಧ ರಕ್ಷಣೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾಕಾರರು ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಿ, ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande