
ಗದಗ, 01 ಜೂನ್ (ಹಿ.ಸ.) :
ಆ್ಯಂಕರ್ : ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿ, ಅವರ ಕಣ್ಣೀರು ಒರೆಸುವ ಗುಣವುಳ್ಳ ನಾಯಕರು ಸಮಾಜಕ್ಕೆ ಅಗತ್ಯವಾಗಿದ್ದು, ಹಿರಿಯ ಸಚಿವ ಎಚ್.ಕೆ. ಪಾಟೀಲರ ಪುತ್ರ ಹಾಗೂ ಕಾಂಗ್ರೆಸ್ ಯುವ ಮುಖಂಡ ಕೃಷ್ಣಗೌಡ್ರು ಪಾಟೀಲ ಅವರು ಜನಪರ ಕಾಳಜಿಯ ಮೂಲಕ ಮಾದರಿ ನಾಯಕತ್ವ ತೋರಿದ್ದಾರೆ ಎಂದು ಗದಗಿನ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಪ್ರಶಂಸಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಸುರಿದ ಭಾರಿ ಬಿರುಗಾಳಿ ಹಾಗೂ ಮಳೆಯಿಂದ ಗದಗ ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನದ ಹಿಂಭಾಗದ ಖಾನತೋಟ ರಸ್ತೆಯಲ್ಲಿರುವ ಹಿರಿಯ ಮುಖಂಡ ನಾಸೀರುದ್ದೀನ್ ಮುಲ್ಲಾ ಅವರ ಮನೆ ಮೇಲೆ ಬೃಹತ್ ಮರ ಬಿದ್ದು ಅಪಾರ ಹಾನಿ ಸಂಭವಿಸಿತ್ತು ಎಂದು ತಿಳಿಸಿದ್ದಾರೆ.
ಅವಘಡದಲ್ಲಿ ಮನೆಯ ಮೇಲ್ಚಾವಣಿ, ಶೌಚಾಲಯ, ಸ್ನಾನದ ಗೃಹ ಸೇರಿದಂತೆ ಮನೆಯ ವಿವಿಧ ಭಾಗಗಳು ಸಂಪೂರ್ಣ ಜಖಂಗೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಬದುಕಿನ ಆಧಾರ ಕಳೆದುಕೊಂಡು ಆತಂಕದಲ್ಲಿದ್ದ ಕುಟುಂಬದ ಪರಿಸ್ಥಿತಿಯನ್ನು ಅರಿತು ಕಾಂಗ್ರೆಸ್ ಯುವ ನಾಯಕ ಕೃಷ್ಣಗೌಡ್ರು ಪಾಟೀಲ ಅವರು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂತ್ರಸ್ತ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ ಅವರು, “ನಾವು ನಿಮ್ಮ ಜೊತೆಯಲ್ಲಿದ್ದೇವೆ, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ” ಎಂದು ಧೈರ್ಯ ತುಂಬಿದರು. ಅವರ ಈ ನಡೆ ಕುಟುಂಬದಲ್ಲಿ ಹೊಸ ಆಶಾಭಾವನೆ ಮತ್ತು ಆತ್ಮವಿಶ್ವಾಸ ಮೂಡಿಸಿದೆ ಎಂದು ಕೃಷ್ಣಾ ಹಡಪದ ತಿಳಿಸಿದ್ದಾರೆ.
ಕೇವಲ ಸಾಂತ್ವನ ಹೇಳುವುದಕ್ಕೆ ಸೀಮಿತವಾಗದೇ, ಸ್ಥಳದಲ್ಲೇ ಇದ್ದುಕೊಂಡು ನಗರಸಭೆ ಪೌರಾಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಕೃಷ್ಣಗೌಡ್ರು ಪಾಟೀಲ ಅವರು, ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಅಲ್ಲದೇ ಹಾನಿಗೊಳಗಾದ ಮನೆಯ ಮೇಲ್ಚಾವಣಿ ದುರಸ್ತಿ, ನೂತನ ಶೌಚಾಲಯ ಹಾಗೂ ಸ್ನಾನದ ಗೃಹ ನಿರ್ಮಾಣ ಸೇರಿದಂತೆ ಅಗತ್ಯ ಪರಿಹಾರವನ್ನು ನಗರಸಭೆಯ ವಿಶೇಷ ನಿಧಿಯಡಿ ತುರ್ತಾಗಿ ಒದಗಿಸಬೇಕು ಎಂದು ಮನವಿ ಮಾಡಿದರೆಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಇಂದಿನ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಅನೇಕರು ಕಚೇರಿಗಳಲ್ಲೇ ಕುಳಿತು ಆದೇಶ ನೀಡುವ ಪರಿಸ್ಥಿತಿ ಕಂಡುಬರುತ್ತಿರುವಾಗ, ಬಡವರ ಸಂಕಷ್ಟಕ್ಕೆ ನೇರವಾಗಿ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ ಕೃಷ್ಣಗೌಡ್ರು ಪಾಟೀಲ ಅವರ ಮಾನವೀಯತೆ ಹಾಗೂ ಕಾಳಜಿ ಶ್ಲಾಘನೀಯವಾಗಿದೆ ಎಂದು ಕೃಷ್ಣಾ ಹಡಪದ ಅಭಿಪ್ರಾಯಪಟ್ಟಿದ್ದಾರೆ.
ಅಧಿಕಾರ ಇರಲಿ ಅಥವಾ ಇಲ್ಲದಿರಲಿ, ಸದಾ ಜನಸಾಮಾನ್ಯರ ಸುಖ-ದುಃಖಗಳಲ್ಲಿ ಭಾಗಿಯಾಗುವ ನಾಯಕತ್ವ ಸಮಾಜಕ್ಕೆ ಪ್ರೇರಣೆಯಾಗುತ್ತದೆ. ನಾಸೀರುದ್ದೀನ್ ಮುಲ್ಲಾ ಅವರ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳಿಗೆ ಸಾರ್ವಜನಿಕ ವಲಯ ಹಾಗೂ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಖಾನತೋಟ ಓಣಿಯ ಹಿರಿಯರು, ಸ್ಥಳೀಯ ಮುಖಂಡರು, ಯುವ ನಾಯಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೃಷ್ಣಗೌಡ್ರು ಪಾಟೀಲ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ನಮ್ಮ ಓಣಿಯ ಕುಟುಂಬದ ಸಂಕಷ್ಟದ ಸಂದರ್ಭದಲ್ಲಿ ದೇವರಂತೆ ಧಾವಿಸಿ ಬಂದು ಧೈರ್ಯ ತುಂಬಿದ ಕೃಷ್ಣಗೌಡ್ರು ಪಾಟೀಲ ಸಾಹೇಬರ ನಡೆ ನಿಜಕ್ಕೂ ಶ್ಲಾಘನೀಯವಾಗಿದೆ. ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆಸರೆಯಾಗಿ ನಿಂತಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಅರುಣ ರಾಂಪೂರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP