ಬಳ್ಳಾರಿ - ದ್ವಿಚಕ್ರ ವಾಹನ ಸವಾರರಿಗೆ `ಹೆಲ್ಮೆಟ್ ಕಡ್ಡಾಯ'
ಸವಾರರಿಗೆ
ಬಳ್ಳಾರಿ - ದ್ವಿಚಕ್ರ ವಾಹನ ಸವಾರರಿಗೆ `ಹೆಲ್ಮೆಟ್ ಕಡ್ಡಾಯ'


ಬಳ್ಳಾರಿ, 01 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯಾದ್ಯಂತ ಜೂನ್ 1 ರ ಸೋಮವಾರದಿಂದ ದ್ವಿಚಕ್ರ ವಾಹನ ಸವಾರರು `ಕಡ್ಡಾಯವಾಗಿ ಹೆಲ್ಮೆಟ್' ಧರಿಸಬೇಕು ಎಂದು ಜಿಲ್ಲಾ ಪೊಲೀಸರು ಆದೇಶ ಜಾರಿ ಮಾಡಿರುವ ಕಾರಣ ಬಳ್ಳಾರಿ ಜಿಲ್ಲೆಯ ಬಹುತೇಕ ನಗರ, ಪಟ್ಟಣ ಮತ್ತು ಗ್ರಾಮಗಳ - ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಪೊಲೀಸರು ಹೆಲ್ಮೆಟ್ ಪರಿಶೀಲನೆ ಮಾಡಿ, ದಂಡವನ್ನು ಸಂಗ್ರಹಿಸುತ್ತಿರುವುದು ಸೋಮವಾರದ ಸಾಮಾನ್ಯ ಹಾಗೂ ವಿಶೇಷ `ಸುದ್ದಿ'ಯಾಗಿದೆ.

ಜೂನ್ 1, 2026ರ ಸೋಮವಾರದಿಂದ ದ್ವಿಚಕ್ರ ವಾಹನ ಸವಾರರು `ಹೆಲ್ಮೆಟ್ ಕಡ್ಡಾಯ'ವಾಗಿ ಧರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ. ಪೆನ್ನೇಕರ್ ಅವರು 15 ದಿನಗಳ ಮುಂಚಿತವಾಗಿಯೇ ಆದೇಶ ಜಾರಿ ಮಾಡಿ, ವ್ಯಾಪಕ ಪ್ರಚಾರ ನೀಡಿದ್ದರು. ಆದರೂ, ಬಳ್ಳಾರಿಯಲ್ಲಿ ಈ ನೀತಿ ಜಾರಿ ಆಗುತ್ತದೆಯೇ? ಎನ್ನವುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿತ್ತು. ಆದರೆ, ಸೋಮವಾರ ಬೆಳಗ್ಗೆ 8 ಗಂಟೆಯಿಂದ ಬಹುತೇಕ ರಸ್ತೆಗಳಲ್ಲಿ ಪೊಲೀಸರನ್ನು ಕಂಡ ಜನರು, ಹೆಲ್ಮೆಟ್ ಧರಿಸಲು ಮುಂದಾಗಿದ್ದರು. ಬಹುತೇಕರು ಹೆಲ್ಮೆಟ್ ಧರಿಸಲು ನಿರಾಕರಿಸಿದ್ದರೂ, ಪೊಲೀಸರು, `ನಮಗಾಗಿ ಅಲ್ಲ. ಕಾನೂನಿನ ಭಯಕ್ಕಾಗಿ ಅಲ್ಲ. ನಿಮಗಾಗಿ, ನಿಮ್ಮ ಕುಟುಂಬದವರ ಹಿತಕ್ಕಾಗಿ' ಎಂದು ಮನವರಿಕೆ ಮಾಡಿಕೊಡಲು ಹರಸಾಹಸಪಟ್ಟರು.

ಇನ್ನೂ ಕೆಲವೆಡೆ 500 ರೂಪಾಯಿ ದಂಡವನ್ನು ಸಂಗ್ರಹ ಮಾಡುತ್ತಿದ್ದುದ್ದು ಸಾಮಾನ್ಯವಾಗಿತ್ತು. ಇನ್ನು ಹಲವರು ಗಾಡಿಯನ್ನು ಪೊಲೀಸರು ತಿಳಿದ್ದಲ್ಲಿ ಬಿಟ್ಟು - ಹೆಲ್ಮೆಟ್ ಖರೀದಿಸಿ, ಪೊಲೀಸರಿಗೆ ತೋರಿಸಿ ಗಾಡಿಯನ್ನು ತೆಗೆದುಕೊಂಡು ಹೋದರು. ಆದರೆ, ಹೆಲ್ಮೆಟ್ ಧರಿಸುವ ಕುರಿತು ಸಾರ್ವಜನಿಕರಲ್ಲಿ ತೀವ್ರವಾದ ಅಸಮಾಧಾನ ಇದ್ದರೂ, ಬಿಸಿಲು, ತಾಪ, ಸೆಖೆ - ಬೆವರು ಇನ್ನಿತರೆ ಕಾರಣಗಳನ್ನು ಹೇಳುತ್ತಿದ್ದರೂ, ಕಾನೂನಾತ್ಮಕವಾಗಿ ಹೆಲ್ಮೆಟ್ ಧರಿಸುವುದು ಅನಿವಾರ್ಯವಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande