ಜೂನ್ 6ರಂದು ವಿಜಯಪುರದಲ್ಲಿ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಸಮಾವೇಶ
ವಿಜಯಪುರ, 01 ಜೂನ್ (ಹಿ.ಸ.) : ಆಂಕರ್ : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ವತಿಯಿಂದ ಜೂನ್ 6ರಂದು ವಿಜಯಪುರ ನಗರದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯುತ್ಸವವನ್ನು ಭವ್ಯವಾಗಿ ಆಯೋಜಿಸಲಾಗಿದೆ ಎಂದು ಕೆಕೆಎಂಪಿ ಜಿಲ್ಲಾ ಅಧ್ಯಕ್ಷ ಭೀಮಾಶಂಕರ
ಜಯಂತಿ


ವಿಜಯಪುರ, 01 ಜೂನ್ (ಹಿ.ಸ.) :

ಆಂಕರ್ : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ವತಿಯಿಂದ ಜೂನ್ 6ರಂದು ವಿಜಯಪುರ ನಗರದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯುತ್ಸವವನ್ನು ಭವ್ಯವಾಗಿ ಆಯೋಜಿಸಲಾಗಿದೆ ಎಂದು ಕೆಕೆಎಂಪಿ ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಶಿವಾಳಕರ ತಿಳಿಸಿದ್ದಾರೆ.

ವಿಜಯಪುರ ನಗರದ ಕೆಕೆಎಂಪಿ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 6ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೆಕೆಎಂಪಿ ಸಮುದಾಯ ಭವನದಲ್ಲಿ ನಡೆಯಲಿರುವ ಸಮಾರಂಭಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಾವಿರಾರು ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಂಗಳೂರು ವಿರಂಪುರದ ಗೋಸಾಯಿ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ವಹಿಸಲಿದ್ದು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಎಸ್. ಸುರೇಶರಾವ ಸಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಕೆಕೆಎಂಪಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮಾಜದ ಯುವ ಪೀಳಿಗೆಗೆ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ, ತತ್ವ ಹಾಗೂ ದೇಶಭಕ್ತಿಯ ಸಂದೇಶವನ್ನು ತಲುಪಿಸುವ ಉದ್ದೇಶದಿಂದ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ವಿಶೇಷ ವಸ್ತು ಸಂಗ್ರಹಾಲಯ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಜೊತೆಗೆ ಸಮಾಜವನ್ನು ತಳಮಟ್ಟದಿಂದ ಸಂಘಟಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪರಿಷತ್ತಿನ ಶಾಖೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಅವರು ಹೇಳಿದರು.

ಈ ಸಮಾವೇಶದಲ್ಲಿ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ, ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ, ಅಂಗವಿಕಲರಿಗೆ ವಿಶೇಷ ನೆರವು ಹಾಗೂ ವಿಧವಾ ವೇತನ ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಹಲವು ಯೋಜನೆಗಳನ್ನು ಘೋಷಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೂನ್ 6ರಂದು ರಾಜ್ಯಮಟ್ಟದ ಸಭೆಯನ್ನೂ ಆಯೋಜಿಸಲಾಗಿದ್ದು, ರಾಜ್ಯಾಧ್ಯಕ್ಷ ಎಸ್. ಸುರೇಶರಾವ ಸಾಠೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 70ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ವಿಜಯಪುರ ಜಿಲ್ಲೆಯ 13 ತಾಲೂಕು ಸಮಿತಿಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದು, ಸಮಾಜದ ಸಂಘಟನೆ, ಅಭಿವೃದ್ಧಿ ಮತ್ತು ಹಕ್ಕೊತ್ತಾಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಸಮಾವೇಶದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ, ಯುವಕರಿಗೆ ಉದ್ಯೋಗಾವಕಾಶ, ಉನ್ನತ ಶಿಕ್ಷಣಕ್ಕೆ ನೆರವು, ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಶಿವಾಳಕರ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ರಾಮು ಜಾಧವ ಮಾತನಾಡಿ, ಜೂನ್ 6ರಂದು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನವಾಗಿರುವುದರಿಂದ ಈ ದಿನಕ್ಕೆ ವಿಶೇಷ ಮಹತ್ವವಿದ್ದು, ರಾಜ್ಯಮಟ್ಟದ ಸಭೆಯನ್ನು ಆಯೋಜಿಸಲಾಗಿದೆ. ಜೂನ್ 7ರಂದು ಶಿವಾಜಿ ಮಹಾರಾಜರ

ಜಯಂತೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಮರಾಠ ಸಮಾಜದ ಬಂಧುಗಳ ಜೊತೆಗೆ ಹಿಂದೂ ಸಮುದಾಯದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸುರೇಶ ಜಾಧವ, ರಾಮು ಜಗತಾಪ, ಸಂಜಯ ಜಾಧವ, ರಮೇಶ ಗಾಯಕವಾಡ, ರಮೇಶ ಬೀಳಗಿ, ಮಹಾದೇವ ಪವಾರ, ಸಾಗರ ಘೋರ್ಪಡೆ, ತುಕಾರಾಮ ಘೋರ್ಪಡೆ, ಸಂತೋಷ ಪವಾರ ಹಾಗೂ ಸುಧೀರ ಪವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande