
ದಾವಣಗೆರೆ, 01 ಜೂನ್ (ಹಿ.ಸ.) :
ಆ್ಯಂಕರ್ : ದಾವಣಗೆರೆ ಜಿಲ್ಲೆಯ ಶಾಲಾ, ಕಾಲೇಜು, ಅಂಗನವಾಡಿ ಕೇಂದ್ರಗಳು, ಆಸ್ಪತ್ರೆ ಹಾಗೂ ಇನ್ನಿತರೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಂತಿರುವ ನೀರನ್ನು ಸ್ವಚ್ಚಗೊಳಿಸಿರುವ ವರದಿಯನ್ನು ತಪ್ಪದೇ ನೀಡಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳೊಂದಿಗೆ ಆಯೋಜಿಸಲಾಗಿದ್ದ ಪಲ್ಸ್ ಪೊಲೀಯೋ, ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಸೊಳ್ಳೆ ಪರದೆಯನ್ನು ಅಳವಡಿಸಬೇಕು. ಬಳಸುವ ನೀರಿಗೆ ಬೇವಿನ ಎಣ್ಣೆಯನ್ನು ಬೇರಿಸಬೇಕು. ಶಾಲಾ ಮಕ್ಕಳಿಗೆ ಒಡಮಸ್ ಹಚ್ಚಿಕೊಂಡು ಬರುವಂತೆ ತಿಳಿಸಬೇಕು. ಗ್ಯಾರೇಜ್ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಮಾಡಬೇಕು. ವೈದ್ಯರು ತಮಗೆ ನಿಯೋಜಿತ ಕರ್ತವ್ಯವನ್ನು ಸಾಮಾಜಿಕ ಕಳಕಳಿಯಿಂದ ಮಾಡಬೇಕು ಎಂದರು.
ಸಾಂಕ್ರಾಮಿಕ ರೋಗ ತಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಮಳೆಗಾಲ ಪ್ರಾರಂಭವಾಗಿದ್ದು, ಮಲೇರಿಯಾ ಹರಡುವ ಕಾಲ ಇದಾಗಿದೆ. ಹೀಗಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ನೀರು ಹರಿದುಹೋಗುವ ಚರಂಡಿಗಳನ್ನು ಶುಚಿಗೊಳಿಸಬೇಕು, ಎಲ್ಲಿಯೂ ನೀರು ಸಂಗ್ರಹವಾಗದಂತೆ ನೋಡಿಕೊಂಡು ಮಲೇರಿಯಾ ಹರಡದಂತೆ ಎಚ್ಚರವಹಿಸಬೇಕು ಎಂದರು.
ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆಪರದೆ ಹಾಗೂ ರೆಪೆಲೆಂಟ್ಗಳ ಉಪಯೋಗ, ಕಿಟಕಿಗಳಿಗೆ ಜಾಲರಿ ಹಾಕಿದರೆ ಮನೆಯೊಳಗೆ ಸೊಳ್ಳೆ ಬರುವುದನ್ನು ತಡೆಗಟ್ಟಬಹುದು. ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು.
ಸೊಳ್ಳೆರಹಿತ ಓವರ್ ಹೆಡ್ ಟ್ಯಾಂಕ್ ಹಾಗೂ ಅಂಡರ್ ಗ್ರೌಂಡ್ ಟ್ಯಾಂಕ್ಗಳನ್ನು ನಿರ್ಮಿಸುವಂತೆ ಅಗತ್ಯವಾದ ನಿಯಮಾವಳಿಗಳನ್ನು ಜಾರಿಗೊಳಿಸಬೇಕು ಮತ್ತು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಸಬೇಕು. ವಾರಕೊಮ್ಮೆ ಸೊಳ್ಳೆನಾಶಕ ದ್ರಾವಣವನ್ನು ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಸಿಂಪಡಿಸಬೇಕು. ನಗರ ಪ್ರದೇಶಗಳಲ್ಲಿ ಅನಾಫಿಲಿಸ್ ಸೊಳ್ಳೆಯು ಸಿಮೆಂಟ್ ತೊಟ್ಟಿ, ಸಿಂಟೆಕ್ಸ್, ಡ್ರಂಗಳಲ್ಲಿ ಉತ್ಪತ್ತಿಯಾಗುವುದರಿಂದ ಅವುಗಳನ್ನು ನಿರಂತರವಾಗಿ ಮುಚ್ಚುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.