
ವಿಜಯಪುರ, 01 ಜೂನ್ (ಹಿ.ಸ.) :
ಆಂಕರ್ : ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದ ಹೇಳಿಕೆಗಳು ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿವೆ. ಸಚಿವ ಸ್ಥಾನ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ, ಕಾಂಗ್ರೆಸ್ ಆಂತರಿಕ ಬೆಳವಣಿಗೆಗಳು ಹಾಗೂ ಜಾತಿ ಸಮೀಕರಣಗಳ ಕುರಿತು ಯತ್ನಾಳ್ ತೀಕ್ಷ್ಣ ಟೀಕೆಗಳನ್ನು ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸಂಪುಟ ರಚನೆ ಪ್ರಕ್ರಿಯೆಯನ್ನು “ಸಂಪುಟ ಸರ್ಕಸ್” ಎಂದು ಬಣ್ಣಿಸಿದರು.
“136 ಶಾಸಕರು ಎಲ್ಲರೂ ಮಂತ್ರಿಗಳಾಗಬೇಕು ಎಂದು ಬಯಸುತ್ತಾರೆ. ಕೆಲವರು ಜನಸೇವೆ ಮಾಡಲು ಸಚಿವ ಸ್ಥಾನ ಕೇಳಿದರೆ, ಇನ್ನೂ ಕೆಲವರು ಲೂಟಿ ಮಾಡಲು ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸುತ್ತಾರೆ. ಹಣದ ಆಧಾರದ ಮೇಲೂ ಸಚಿವ ಸ್ಥಾನಗಳ ವ್ಯಾಪಾರ ನಡೆಯುವ ಸಾಧ್ಯತೆ ಇದೆ. ಕೆಲವರಿಗೆ ತಿಂಗಳ ಪ್ಯಾಕೇಜ್ ನಿಗದಿಪಡಿಸಿ ಕೂಡಾ ಸಚಿವ ಸ್ಥಾನ ನೀಡಬಹುದು” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಡೆದಿರುವ ಬೆಳವಣಿಗೆಗಳು ನೋವು ತಂದಿವೆ ಎಂದು ಹೇಳಿದರು.
“ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿರುವುದು ಹಲವರಿಗೆ ಬೇಸರ ತಂದಿದೆ. ಅವರ ಬೆನ್ನ ಹಿಂದೆ ನಿಂತಿದ್ದವರೇ ಅವರಿಗೆ ಚೂರಿ ಹಾಕಿದ್ದಾರೆ ಎಂಬುದು ಈಗ ಗೊತ್ತಾಗುತ್ತಿದೆ. ಹಾಲುಮತ ಸಮಾಜಕ್ಕೂ ಈ ಸಂಗತಿ ಅರ್ಥವಾಗಿದೆ. ಸಿದ್ದರಾಮಯ್ಯ ಅವರನ್ನು ಈ ರೀತಿ ಅವಮಾನಿಸಬಾರದಿತ್ತು” ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, “ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕಡೆಗಳಲ್ಲಿ ಹೆಚ್ಚಾಗಿ ಮೇಲ್ಜಾತಿಯವರೇ ಮುಖ್ಯಮಂತ್ರಿಗಳಾಗಿದ್ದಾರೆ. ದಲಿತರು ಹಾಗೂ ಹಿಂದುಳಿದ ವರ್ಗಗಳ ಪರ ಮಾತನಾಡುವ ನೈತಿಕ ಹಕ್ಕು ಈಗ ರಾಹುಲ್ ಗಾಂಧಿಗೆ ಉಳಿದಿಲ್ಲ. ಅವರು ದಲಿತ ಹಾಗೂ ಹಿಂದುಳಿದ ವರ್ಗಗಳ ವಿರೋಧಿಯಾಗಿದ್ದಾರೆ” ಎಂದು ಟೀಕಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಸಾಧ್ಯತೆಗಳ ಬಗ್ಗೆ ಮಾತನಾಡಿದ ಅವರು, “ಡಿಕೆಶಿ ಮುಖ್ಯಮಂತ್ರಿ ಆಗುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಂತೋಷವಿದೆ. ಡಿಕೆಶಿ ಮುಖ್ಯಮಂತ್ರಿ ಆದ ದಿನ ಮೊದಲ ಫೋನ್ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹೋಗಬಹುದು. ತಂದೆಯ ಸ್ನೇಹಿತ ಹೋದರೂ ನನ್ನ ಪಾಲುದಾರ ಬಂದಿದ್ದಾರೆ ಎನ್ನುವ ಸ್ಥಿತಿ ಉಂಟಾಗಬಹುದು” ಎಂದು ವ್ಯಂಗ್ಯವಾಡಿದರು.
ಮುಸ್ಲಿಂ ಸಮುದಾಯದ ಕುರಿತು ಮಾತನಾಡಿದ ಯತ್ನಾಳ್, “ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೂ ಒಬ್ಬ ಮುಸ್ಲಿಂ ನಾಯಕ ಕೂಡ ಅವರ ಪರವಾಗಿ ಧ್ವನಿ ಎತ್ತಲಿಲ್ಲ. ಆದರೆ ನಾನು ವೈಯಕ್ತಿಕವಾಗಿ ಸಿದ್ದರಾಮಯ್ಯ ವಿರುದ್ಧ ಮಾತನಾಡುವುದಿಲ್ಲ. ಹಿಂದೂ ಸಮಾಜವೂ ಅವರ ಬಗ್ಗೆ ಹೀನಾಯವಾಗಿ ಮಾತನಾಡಬಾರದು” ಎಂದು ಹೇಳಿದರು.
ತಮ್ಮ ವಿರುದ್ಧ ದಾಖಲೆಗಳು ಅಥವಾ ಫೈಲ್ಗಳ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್, “ಈ ಹಿಂದೆ ನನ್ನ ಫೈಲ್ಗಳನ್ನು ತಂದುಕೊಡಿ ಎಂದು ಕೆಲವರು ಹೇಳುತ್ತಿದ್ದರು. ಈಗ ಬೇರೆಯವರ ಫೈಲ್ಗಳೇ ಓಪನ್ ಆಗುವ ಸಮಯ ಬಂದಿದೆ. ಎಲ್ಲರೂ ಹುಷಾರಾಗಿರಬೇಕು” ಎಂದು ಎಚ್ಚರಿಕೆ ನೀಡಿದರು.
ಯತ್ನಾಳ್ ಅವರ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸಚಿವ ಸಂಪುಟ ವಿಸ್ತರಣೆ ಮತ್ತು ಕಾಂಗ್ರೆಸ್ ಆಂತರಿಕ ರಾಜಕೀಯದ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿವೆ. ಅವರ ಮಾತುಗಳಿಗೆ ಆಡಳಿತಾರೂಢ ಕಾಂಗ್ರೆಸ್ ನಾಯಕರು ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande