
ಕೊಪ್ಪಳ, 01 ಜೂನ್ (ಹಿ.ಸ.) :
ಆ್ಯಂಕರ್ : ಭಾಗ್ಯನಗರ ಪಟ್ಟಣ ಪಂಚಾಯತ ವತಿಯಿಂದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿಯಲ್ಲಿ ನಗರದ ಬೀದಿಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಗಳ ಯೋಜನೆಗಳನ್ನು ಕಲ್ಪಿಸುವುದಕ್ಕಾಗಿ ನಗರ ಮಟ್ಟದಲ್ಲಿ ಬ್ಯಾಂಕ್ಗಳ ಸಹಯೋಗದೊಂದಿಗೆ ಲೋಕ ಕಲ್ಯಾಣ ಮೇಳಗಳನ್ನು ಜೂನ್ 1 ರಿಂದ ಜೂನ್ 30ರ ವರೆಗೆ 1 ತಿಂಗಳ ಕಾಲ ಆಯೋಜಿಸುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರ ನವದೆಹಲಿ ಮತ್ತು ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಬೆಂಗಳೂರುರವರು ಸೂಚಿಸಿರುತ್ತಾರೆ.
ಅದರಂತೆ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ ಜೂನ್ 1 ರಿಂದ ಜೂನ್ 30ರ ವರೆಗೆ ನಗರದ ಬೀದಿಬದಿ ವ್ಯಾಪಾರಿಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ, ಪಿ.ಎಮ್ ಸ್ವ-ನಿಧಿ ಯೋಜನೆಯಡಿ ಮೊದಲನೇ ಹಂತ ರೂ. 15,000 ಗಳು, ಎರಡನೇ ಹಂತ ರೂ. 25,000 ಗಳು ಮತ್ತು ಮೂರನೇ ಹಂತ ರೂ. 50,000 ಗಳ ಕಿರು ಸಾಲ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ನಗರ ಸ್ಥಳೀಯ ಸಂಸ್ಥೆಗಳ ಡೇ ನಲ್ಮ್ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ ಡೇ-ನಲ್ಮ್ ವಿಭಾಗದ ವಿಷಯ ನಿರ್ವಾಹಕರನ್ನು ಸಂಪರ್ಕಿಸುವಂತೆ ಭಾಗ್ಯನಗರ ಪಟ್ಟಣ ಪಂಚಾಯತ ಕಾರ್ಯಾಲಯದ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್