ಡಿಕೆಶಿ ಸಂಪುಟ ಸೇರ್ಪಡೆಗೆ ಬಾಗಲಕೋಟೆ ಪರದಾಟ : ಒಂದು ಸಚಿವ ಸ್ಥಾನಕ್ಕೂ ಹೆಚ್ಚಿದ ಹೋರಾಟ!
ಉಂಟಾಗಿದೆ
ಸಚಿವ ಅಕಾಂಕ್ಷಿ


ಬಾಗಲಕೋಟೆ, 01 ಜೂನ್ (ಹಿ.ಸ.) :

ಆಂಕರ್ : ಒಂದು ಕಾಲದಲ್ಲಿ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ, ಪ್ರಾತಿನಿಧ್ಯ ಹಾಗೂ ಅಧಿಕಾರದ ಕೇಂದ್ರವಾಗಿದ್ದ ಬಾಗಲಕೋಟೆ ಜಿಲ್ಲೆ ಇಂದು ಸಚಿವ ಸಂಪುಟದಲ್ಲಿ ಒಂದು ಸ್ಥಾನ ಪಡೆಯುವುದಕ್ಕೂ ಪರದಾಡುವ ಪರಿಸ್ಥಿತಿಗೆ ತಲುಪಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಪ್ರತಿ ಸರ್ಕಾರದಲ್ಲೂ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದ ಜಿಲ್ಲೆಯ ನಾಯಕರು ಇಂದು ಸಚಿವ ಸ್ಥಾನಕ್ಕಾಗಿ ಒತ್ತಾಯಿಸಬೇಕಾದ ಸ್ಥಿತಿ ಉಂಟಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಕೇವಲ ಒಬ್ಬ ಸಚಿವರ ಪ್ರಾತಿನಿಧ್ಯ ಮಾತ್ರ ದೊರೆತಿತ್ತು. ಇದೀಗ ನಿಯೋಜಿತ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಂಪುಟ ರಚನೆಯ ಸಂದರ್ಭದಲ್ಲಿಯೂ ಜಿಲ್ಲೆಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಒತ್ತಡ :

ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕರಾದ ಜೆ.ಟಿ. ಪಾಟೀಲ ಹಾಗೂ ವಿಜಯಾನಂದ ಕಾಶಪ್ಪನವರ ಅವರು ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಜಿಲ್ಲೆಗೆ ಪ್ರಾತಿನಿಧ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ನಾಯಕರ ಬೆಂಬಲಿಗರು ಕೂಡ ಪ್ರತಿಭಟನೆ, ಸಭೆ ಹಾಗೂ ಪತ್ರಿಕಾಗೋಷ್ಠಿಗಳ ಮೂಲಕ ಒತ್ತಡ ಹೇರುತ್ತಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಮುಖಂಡರು ಜಿಲ್ಲೆಗೆ ಕನಿಷ್ಠ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದಾಗ್ಯೂ ಸಚಿವ ಸ್ಥಾನ ಖಚಿತವಾಗುವ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ ಎನ್ನುವುದು ನಾಯಕರ ಆತಂಕಕ್ಕೆ ಕಾರಣವಾಗಿದೆ.

ರಾಜಕೀಯ ಇತಿಹಾಸದಲ್ಲಿ ಬಾಗಲಕೋಟೆಯ ಪ್ರಭಾವ :

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಬಾಗಲಕೋಟೆ ಜಿಲ್ಲೆ ವಿಶಿಷ್ಟ ಸ್ಥಾನಮಾನ ಹೊಂದಿದೆ. ಬಿ ಡಿ ಜತ್ತಿ ಹಾಗೂ ಎಸ್ ಆರ್ ಕಂಠಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು. ನಾಗರಾಳ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಇದೇ ರೀತಿ ಪಿ.ಎಂ. ನಾಡಗೌಡ ಅವರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರೆ, ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರಿದ್ದರು.

ಎಸ್ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರಂತಹ ದಿಗ್ಗಜರು ಜಿಲ್ಲೆಯ ರಾಜಕೀಯ ಪರಂಪರೆಯನ್ನು ಸಮೃದ್ಧಗೊಳಿಸಿದ್ದರು. ಒಂದು ಕಾಲದಲ್ಲಿ ರಾಜ್ಯ ರಾಜಕಾರಣದ ಪ್ರಮುಖ ಕೇಂದ್ರವಾಗಿದ್ದ ಜಿಲ್ಲೆ ಇಂದು ಸಚಿವ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿರುವುದು ರಾಜಕೀಯ ವಿಶ್ಲೇಷಕ ಹಿರಿಯ ಪತ್ರಕರ್ತ ಬಾಬು ತಡಲಗಿ ಗಮನ ಸೆಳೆದಿದೆ.

ಒಗ್ಗಟ್ಟಿನ ಕೊರತೆಯೇ ಪ್ರಮುಖ ಸಮಸ್ಯೆ?

ಜಿಲ್ಲೆಯ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲಿ ಒಂದು ರಾಜಕೀಯ ಒಗ್ಗಟ್ಟಿನ ಕೊರತೆ ಎನ್ನಲಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಒಟ್ಟಾಗಿ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಐವರು ಶಾಸಕರು ಹಾಗೂ ಒಬ್ಬ ಮೇಲ್ಮನೆ ಸದಸ್ಯರು ಒಟ್ಟಾಗಿ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ ಉದಾಹರಣೆ ಇತ್ತೀಚೆಗೆ ಕಂಡುಬಂದಿಲ್ಲ. ಬದಲಾಗಿ ಪ್ರತಿ ಸಚಿವಾಕಾಂಕ್ಷಿಯೂ ಪ್ರತ್ಯೇಕವಾಗಿ ಪ್ರಯತ್ನ ನಡೆಸುತ್ತಿರುವುದು ಜಿಲ್ಲೆಯ ರಾಜಕೀಯ ಬಲವನ್ನು ಕುಗ್ಗಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಂಭಾವ್ಯ ಸಚಿವರ ಪಟ್ಟಿಯಲ್ಲೂ ಜಿಲ್ಲೆಯ ಹೆಸರು ಇಲ್ಲ :

ಜುಲೈ 3ರಂದು ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮೊದಲ ಹಂತದಲ್ಲಿ ಕೆಲವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ರಾಜಕೀಯ ವಲಯದಲ್ಲಿ ಸಂಭಾವ್ಯ ಸಚಿವರ ಹೆಸರುಗಳು ಹರಿದಾಡುತ್ತಿವೆ.

ಆದರೆ ಆ ಪಟ್ಟಿಗಳಲ್ಲಿ ಬಾಗಲಕೋಟೆ ಜಿಲ್ಲೆಯ ಯಾವುದೇ ಶಾಸಕರ ಹೆಸರು ಪ್ರಮುಖವಾಗಿ ಕೇಳಿಬರುತ್ತಿಲ್ಲ. ಇದರಿಂದ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರಲ್ಲಿ ಆತಂಕ ಹೆಚ್ಚಾಗಿದೆ.

ಜಿಲ್ಲೆಯ ಭವಿಷ್ಯದ ಪ್ರಶ್ನೆ :

ಒಂದು ಕಾಲದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರಭಾವಿ ಸಚಿವರನ್ನು ನೀಡಿದ್ದ ಬಾಗಲಕೋಟೆ ಜಿಲ್ಲೆ ಇಂದು ಒಂದು ಸಚಿವ ಸ್ಥಾನಕ್ಕೂ ಹೋರಾಡಬೇಕಾದ ಪರಿಸ್ಥಿತಿ ಎದುರಿಸುತ್ತಿರುವುದು ಜಿಲ್ಲೆಯ ರಾಜಕೀಯ ಪ್ರಭಾವ ಕುಸಿಯುತ್ತಿರುವ ಸಂಕೇತವೇ ಎಂಬ ಪ್ರಶ್ನೆ ಮೂಡಿಸಿದೆ. ಸಂಪುಟದ ಮೊದಲ ಹಂತದಲ್ಲಿ ಅವಕಾಶ ಸಿಗದಿದ್ದರೂ, ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ದೊರೆಯುತ್ತದೆಯೇ ಎಂಬುದನ್ನು ಜಿಲ್ಲೆಯ ರಾಜಕೀಯ ವಲಯ ಕುತೂಹಲದಿಂದ ಕಾಯುತ್ತಿದೆ.

ಬಾಗಲಕೋಟೆ ಜಿಲ್ಲೆಯ ನಾಯಕರು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ರಾಜ್ಯ ರಾಜಕಾರಣದಲ್ಲಿ ಕಳೆದುಹೋದ ಪ್ರಭಾವವನ್ನು ಮರಳಿ ಪಡೆಯಲು ಸಾಧ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande