ಆಳಂದ ಗಲಭೆ ಪ್ರಕರಣ ಹಿಂಪಡೆದ ಕ್ರಮ ಖಂಡಿಸಿ ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ
ಕಲಬುರಗಿ, 01 ಜೂನ್ (ಹಿ.ಸ.) : ಆ್ಯಂಕರ್ : ಕಲಬುರಗಿ ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಖಂಡಿಸಿ ಭಾರತೀಯ ಜನತಾ ಪಕ್ಷವು ಸೋಮವಾರ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್
Bjp protest


ಕಲಬುರಗಿ, 01 ಜೂನ್ (ಹಿ.ಸ.) :

ಆ್ಯಂಕರ್ : ಕಲಬುರಗಿ ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಖಂಡಿಸಿ ಭಾರತೀಯ ಜನತಾ ಪಕ್ಷವು ಸೋಮವಾರ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿ ಸರ್ಕಾರದ ಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಆಳಂದದ ಪವಿತ್ರ ರಾಘವ ಚೈತನ್ಯ ಶ್ರೀ ಶಿವಲಿಂಗ ದೇವಸ್ಥಾನಕ್ಕೆ ಅಪಚಾರ ಎಸಗಿದ ಆರೋಪ ಎದುರಿಸುತ್ತಿರುವ ಗಲಭೆಕೋರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ಪ್ರಕರಣಗಳನ್ನು ಮರು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಸಮಾಜಘಾತುಕ ಶಕ್ತಿಗಳ ಪರವಾಗಿ ನಿಂತಿದೆ ಎಂದು ಆರೋಪಿಸಿದ ಅವರು, ಧಾರ್ಮಿಕ ನಂಬಿಕೆಗಳ ಮೇಲೆ ದಾಳಿ ನಡೆಸಿದವರನ್ನು ರಕ್ಷಿಸುವ ಮೂಲಕ ಸರ್ಕಾರ ತನ್ನ ನೈತಿಕ ಬದ್ಧತೆಯನ್ನು ಕಳೆದುಕೊಂಡಿದೆ ಎಂದು ಟೀಕಿಸಿದರು.

ಒಂದು ಸಮುದಾಯವನ್ನು ಓಲೈಸುವ ಉದ್ದೇಶದಿಂದ ಮತ್ತೊಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವವರನ್ನು ರಕ್ಷಿಸುವುದು ಬೌದ್ಧಿಕ ದಿವಾಳಿತನದ ಪರಮಾವಧಿಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣ ಹೆಚ್ಚಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಕಲಬುರಗಿಯಲ್ಲಿ ಹೊತ್ತಿಕೊಂಡಿರುವ ಪ್ರತಿಭಟನೆಯ ಕಿಚ್ಚು ರಾಜ್ಯದಾದ್ಯಂತ ವ್ಯಾಪಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಬಹುಸಂಖ್ಯಾತರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ ಅವರು, ಧರ್ಮ, ಸಂಸ್ಕೃತಿ ಮತ್ತು ಸಮಾಜದ ಶಾಂತಿಯನ್ನು ಕದಡುವ ಶಕ್ತಿಗಳಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ವಿರುದ್ಧ ಪಕ್ಷದ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ನ ಹಿಂದೂ ವಿರೋಧಿ ಧೋರಣೆಗೆ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಬೀದರ್ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಬಸವರಾಜ ಮತ್ತಿಮೂಡ್, ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್ ಹಾಗೂ ಶಶಿಲ್ ನಮೋಶಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಮಾಜಿ ಶಾಸಕರಾದ ಸುಭಾಷ್ ಗುತ್ತೇದಾರ್, ಅಪ್ಪುಗೌಡ ಹಾಗೂ ನರಸಿಂಹ ನಾಯಕ್ (ರಾಜು ಗೌಡ) ಸೇರಿದಂತೆ ಹಲವು ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande