ಮಕ್ಕಳ ಮೇಲಿನ ದೌರ್ಜನ್ಯ ತಡೆ ; ಹಿಟ್ನಾಳ ಗ್ರಾಮದಲ್ಲಿ ಜನಸಂಪರ್ಕ ಸಂವಾದ
ಕೊಪ್ಪಳ, 25 ಮೇ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಮತ್ತು ಹಿಟ್ನಾಳ ಗ್ರಾಮ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಿಟ್ನಾಳ ಗ್ರಾಮದಲ್ಲಿ “ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗ
Public relations dialogue in Hitnala village


ಕೊಪ್ಪಳ, 25 ಮೇ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಮತ್ತು ಹಿಟ್ನಾಳ ಗ್ರಾಮ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಿಟ್ನಾಳ ಗ್ರಾಮದಲ್ಲಿ “ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ ಕಾರ್ಯಕ್ರಮ” ನಡೆಯಿತು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಪ್ರತಿಭಾ ಕಾಶಿಮಠ ಅವರು ಮಾತನಾಡಿ, ಇತ್ತೀಚೆಗೆ ಮಕ್ಕಳು ಮಾಧ್ಯಮಗಳ ಪ್ರಭಾವದಿಂದ ಪ್ರೀತಿ, ಪ್ರೇಮದ ಹೆಸರಿನಲ್ಲಿ ತಿಳಿದೊ, ತಿಳಿಯದೆಯೋ ಈ ಕಾಯ್ದೆಯಲ್ಲಿ ಸಿಲುಕುತ್ತಿದ್ದಾರೆ. ಅಲ್ಲದೇ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆಯನ್ನು ಮಾಡಿದಂತವರು, ಭಾಗಿಯಾದವರು, ಪ್ರೋತ್ಸಾಹಿಸಿದವರು ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಈ ಕಾಯ್ದೆಯಲ್ಲಿ ಸಿಲುಕಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ತಾಯಿ ಮರಣ, ಶಿಶು ಮರಣ, ಅಪೌಷ್ಠಿಕ ಮಕ್ಕಳ ಜನನ ನಿರ್ಮೂಲನೆಗಾಗಿ ಸರಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ಅದರನ್ವಯ 18 ವರ್ಷದೊಳಿನ ಹೆಣ್ಣು ಮಗುವಿಗೆ ಮತ್ತು 21 ವರ್ಷದೊಳಗಿನ ಗಂಡು ಮಗುವಿಗೆ ವಿವಾಹವನ್ನು ಮಾಡುವುದನ್ನು ನಿಷೇಧಿಸಿದೆ ಎಂದರು.

ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು ಕರ್ನಾಟಕ ರಾಜ್ಯ ಸರಕಾರವು ಕರ್ನಾಟಕ ತಿದ್ದುಪಡಿಯನ್ನು ತಂದಿದ್ದು, ಅದರನ್ವಯ ರಾಜ್ಯದಲ್ಲಿ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿವೆ. ಬಾಲ್ಯವಿವಾಹವನ್ನು ಮಾಡುವವರು, ಭಾಗವಹಿಸುವವರು, ಆಯೋಜಿಸುವವರು ಎಲ್ಲರಿಗೂ ಕನಿಷ್ಠ 1 ವರ್ಷದಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದ್ದರಿಂದ ಬಾಲ್ಯವಿವಾಹಗಳನ್ನು ಮಾಡಬೇಡಿ, ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಆಫೀಸರ್ ಶಿವಲೀಲಾ ವನ್ನೂರು ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರಕಾರವು ವಿವಿಧ ಕಾನೂನುಗಳನ್ನು ಜಾರಿಯಲ್ಲಿ ತಂದಿರುತ್ತದೆ. ಅವುಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಪ್ರಮುಖವಾದದ್ದು. ಈ ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳ ಮೇಲಿನ ಬೇಧಕ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷಗಳಿಂದ ಅಜೀವ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.

ಲೈಂಗಿಕ ಕಿರುಕುಳ ಅಂದರೆ, ಮಕ್ಕಳಿಗೆ ಶಾಬ್ಧಿಕ, ಅಂಗಿಕ, ಭಾಷಿಕ ಹಾಗೂ ಲಿಖಿತವಾಗಿ ಅವರ ಘನತೆಗೆ ಧಕ್ಕೆ ಉಂಟುಮಾಡಬಹುದಾದ ಯಾವುದೇ ಈ ರೀತಿಯ ಕೃತ್ಯಗಳಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಈ ರೀತಿಯ ಕೃತ್ಯಗಳಿಗೆ ಸಹಾಯ, ಪ್ರೋತ್ಸಾಹ ಮತ್ತು ಪ್ರಯತ್ನಪಟ್ಟವರಿಗೂ ಅಷ್ಟೇ ಪ್ರಮಾಣದ ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಆದ್ದರಿಂದ ಗ್ರಾಮ ಮಟ್ಟದಲ್ಲಿ ವಿವಿಧ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಲು ಗ್ರಾಮ ಮಟ್ಟದ “ಮಕ್ಕಳ ರಕ್ಷಣಾ ಸಮಿತಿ”ಯಲ್ಲಿ ಚರ್ಚಿಸಿ, “ಮಕ್ಕಳ ಹಕ್ಕುಗಳು, ಕಾನೂನುಗಳ ಮತ್ತು ಮಕ್ಕಳ ಸುರಕ್ಷತೆ ಕುರಿತು” ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿ, ತನ್ಮೂಲಕ ಮಕ್ಕಳ ಮೇಲಿನ ಲೈಂಗಿಕ ಹಲ್ಲೆ, ಬಾಲ್ಯವಿವಾಹಗಳನ್ನು ತಡೆದು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ತಿಳಿಸಿದರು.

ಹಿಟ್ನಾಳ ಪ್ರಾಥಮಿಕ ಕೇಂದ್ರದ ಆಡಳಿತ ವೈದ್ಯಧಿಕಾರಿ ಡಾ. ಮಂಜುಳಾ ಶರ್ಮ ಅವರು ಮಾತನಾಡಿ, “ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ತಡೆ ಕಾಯ್ದೆ-2012ನ್ನು ಸರ್ಕಾರವು ಜಾರಿಗೆಗೊಳಿಸಿದ್ದು, ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೆ ಮಕ್ಕಳ ಮೇಲೆನ ದೌರ್ಜನ್ಯವನ್ನು ತಡೆಗಟ್ಟುವುದಾಗಿದೆ. ಈ ಕಾಯ್ದೆಯಡಿಯಲ್ಲಿ 18 ವರ್ಷದೂಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಸಂಜ್ಞೆ, ಶಾಬ್ದಿಕವಾಗಿ ಕಿರುಕುಳನ್ನು ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾದಲ್ಲಿ ಅದು ವಿಚಾರಣಾ ಅರ್ಹ ಮತ್ತು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಮಕ್ಕಳ ಹಕ್ಕುಗಳನ್ನು ಗೌರವಿಸಿ ಎಂದರು.

ರಕ್ಷಣಾಧಿಕಾರಿ ರವಿ ಬಡಿಗೇರ ಅವರು ಮಾತನಾಡಿ, ನವಜಾತ ಶಿಶು ಮತ್ತು ಮಕ್ಕಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೊಗುವುದು ಕಂಡುಬರುತ್ತಿದೆ. ಮಕ್ಕಳ ಮಾರಟ ಮಾಡುವುದು ಕಾನೂನು ಬಾಹಿರ ಅಪರಾವಾಗಿರುತ್ತದೆ. ಯಾರಿಗಾದರು ಮಕ್ಕಳು ಬೆಡವಾದಲ್ಲಿ ಸರಕಾರಕ್ಕೆ ನೀಡಬಹುದು. ಅತಹ ಮಕ್ಕಳ ಆರೈಕೆ ಮತ್ತು ಪೋಷಣೆ ಮಾಡಲಾಗುತದೆ. ಮಕ್ಕಳನ್ನು ಬಿಸಾಕಿ ಹೊದರೆ ಕಾನೂನು ಕ್ರಮಕೈಗೊಳಲಾಗುವುದು ಎಂದು ಹೇಳಿ, ದತ್ತು ಕಾರ್ಯಕ್ರಮ ಯೋಜನೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿಟ್ನಾಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಸಿಬ್ಬಂದಿ ಸುರೇಶ ಯೋಗಿ, ಹಿಟ್ನಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ, ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಾ ಸಜ್ಜನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಮೇಶ ಹರಿಜನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande