
ಭಟ್ಕಳ, 25 ಮೇ (ಹಿ.ಸ.) :
ಆ್ಯಂಕರ್ : ತಣ್ಣಗಾಗಿದ್ದ ಕರಾವಳಿಯ ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಮುರಿನಕಟ್ಟೆ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದಿದೆ. ಭಟ್ಕಳದ ವೆಂಕಟಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಿಸಲಾಗಿದ್ದ ವಿವಾದಿತ ಮುರಿನಕಟ್ಟೆಯನ್ನು ಭಾನುವಾರ ರಾತ್ರಿ ಸಾವಿರಾರು ಯುವಕರು ಸೇರಿ ಧ್ವಂಸಗೊಳಿಸಿದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಇಡೀ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಘಟನೆ ಬಳಿಕ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ ಮೇ 27ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಆರಂಭವಾದ ಬಳಿಕದಿಂದಲೇ ಮುರಿನಕಟ್ಟೆ ವಿವಾದ ಸ್ಥಳೀಯವಾಗಿ ಚರ್ಚೆಯ ಕೇಂದ್ರಬಿಂದುವಾಗಿತ್ತು. ನೂರಾರು ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ ನಂಬಿಕೆ ಹೊಂದಿದ್ದ ಈ ಸ್ಥಳವನ್ನು ಹೆದ್ದಾರಿ ಯೋಜನೆಗಾಗಿ ತೆರವುಗೊಳಿಸಲಾಗಿತ್ತು.
ರಸ್ತೆ ವಿಸ್ತರಣೆಯ ನಂತರ ಇದನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಒಂದು ವರ್ಗದವರು ಒತ್ತಾಯಿಸುತ್ತಿದ್ದರೆ, ಮೂಲ ಸ್ಥಳದಲ್ಲೇ ಮರುನಿರ್ಮಿಸಬೇಕು ಎಂದು ಮತ್ತೊಂದು ವರ್ಗ ಪಟ್ಟು ಹಿಡಿದಿತ್ತು. ಹಲವು ಮನವಿಗಳ ಬಳಿಕವೂ ಆಡಳಿತದಿಂದ ಸ್ಪಷ್ಟ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲೇ ಕಟ್ಟೆಯನ್ನು ಮರು ನಿರ್ಮಿಸಿದ್ದರು.
ಸ್ಥಳದಲ್ಲಿ ಕಟ್ಟೆ ನಿರ್ಮಾಣವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹಾಗೂ ಮಜ್ಜಿಸೆ ಇಸ್ಲಾಹ್ ವ ತಂಝೀಮ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಜೆ. ಮಹೇಶ್ ಶಾಂತಿ ಸಭೆ ನಡೆಸಿ, ಇದು ಹೆದ್ದಾರಿಯ ಅತಿಕ್ರಮಿತ ಪ್ರದೇಶ ಎಂದು ಸ್ಪಷ್ಟಪಡಿಸಿದ್ದರು.
ಆದರೆ ರಾತ್ರಿ ವೇಳೆಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸಾವಿರಾರು ಯುವಕರು ಸ್ಥಳದಲ್ಲಿ ಜಮಾಯಿಸಿ ಘೋಷಣೆಗಳನ್ನು ಹಾಕುತ್ತ ಹೆದ್ದಾರಿ ತಡೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಹಾಗೂ ಉಪ ಪೊಲೀಸ್ ಅಧೀಕ್ಷಕ ಗಿರೀಶ್ ಅವರು ಪರಿಸ್ಥಿತಿ ನಿಯಂತ್ರಿಸಲು ಮಾತುಕತೆ ನಡೆಸುತ್ತಿದ್ದ ವೇಳೆ, ಕೆಲ ಯುವಕರು ಪೊಲೀಸರ ಎದುರೇ ಕಬ್ಬಿಣದ ಸಲಾಕೆಗಳಿಂದ ಮುರಿನಕಟ್ಟೆಯನ್ನು ಭಾಗಶಃ ಧ್ವಂಸಗೊಳಿಸಿದ ಘಟನೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿಡಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಶಾಂತಿ ಕಾಪಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.