ಅಪಪ್ರಚಾರ ಬಿಟ್ಟು ಹಿಂದೂ ಸಮಾವೇಶಕ್ಕೆ ಬನ್ನಿ : ಉಡಚಪ್ಪ ಹಳ್ಳಿಕೇರಿ ಕರೆ
ಗದಗ, 24 ಮೇ (ಹಿ.ಸ.) : ಆ್ಯಂಕರ್ : ಮೇ 31ರಂದು ನಡೆಯಲಿರುವ ಬೃಹತ್ ಹಿಂದೂ ಸಮಾವೇಶದ ಕುರಿತು ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗಳು ಜೋರಾಗಿರುವ ನಡುವೆಯೇ, ಸಮಾವೇಶದ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ ತೀವ್ರ ಅಸಮಾಧಾನ ವ
ಫೋಟೋ


ಗದಗ, 24 ಮೇ (ಹಿ.ಸ.) :

ಆ್ಯಂಕರ್ : ಮೇ 31ರಂದು ನಡೆಯಲಿರುವ ಬೃಹತ್ ಹಿಂದೂ ಸಮಾವೇಶದ ಕುರಿತು ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗಳು ಜೋರಾಗಿರುವ ನಡುವೆಯೇ, ಸಮಾವೇಶದ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೇ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಗದಗ ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ, ಮೇ 31ರಂದು ನಡೆಯಲಿರುವ ಹಿಂದೂ ಸಮಾವೇಶವನ್ನು ಹತ್ತಿಕ್ಕಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಕಣ್ಣೀರಿ ಮಠದ ಶ್ರೀಗಳ ಕುರಿತು ಅಪಪ್ರಚಾರ ನಡೆಸುವುದು ಸರಿಯಲ್ಲ. ಧಾರ್ಮಿಕ ಮುಖಂಡರು ಹಾಗೂ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಿಂದೆ ಶಿವಶರಣ ಮಾದರ ಚೆನ್ನಯ್ಯ ಶ್ರೀಗಳನ್ನೂ ಆರ್ಎಸ್ಎಸ್ ಸ್ವಾಮೀಜಿ ಎಂದು ಟೀಕಿಸಲಾಗಿತ್ತು. ಈಗಲೂ ಕೆಲವರು ಸ್ವಾಮೀಜಿಗಳ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಅವರು ಪರೋಕ್ಷವಾಗಿ ಕೆಲ ಚಿಂತಕರು ಹಾಗೂ ಸಾಹಿತಿ ವಲಯದವರ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾಜದಲ್ಲಿ ಅನಗತ್ಯ ಭಿನ್ನಾಭಿಪ್ರಾಯ ಹಾಗೂ ಒಡಕುಗಳನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಮೂಢನಂಬಿಕೆ ವಿರುದ್ಧ ಮಾತನಾಡುವ ಕೆಲವರು ತಮ್ಮ ವೈಯಕ್ತಿಕ ಜೀವನದಲ್ಲಿ ಪೂಜೆ-ಪುನಸ್ಕಾರ ನಡೆಸುತ್ತಾರೆ. ಆದರೆ ಸಾರ್ವಜನಿಕವಾಗಿ ಬೇರೆ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಟೀಕಿಸಿದರು.

ಜಿಲ್ಲೆಯ 68ಕ್ಕೂ ಹೆಚ್ಚು ಸಂಘಟನೆಗಳ ಸಹಯೋಗದಲ್ಲಿ ಈ ಹಿಂದೂ ಸಮಾವೇಶವನ್ನು ಪಕ್ಷಾತೀತವಾಗಿ ಆಯೋಜಿಸಲಾಗಿದೆ. ವಿವಿಧ ಜಾತಿ-ಧರ್ಮಗಳ ಜನರು ಹಾಗೂ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದೆ. ಆದರೆ ಕೆಲವರು ಸಮಾಜದ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದು, ಪ್ರಚೋದನಕಾರಿ ಹೇಳಿಕೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

“ಬಸವಣ್ಣನವರ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯುವ ಹುನ್ನಾರಗಳ ವಿರುದ್ಧವೇ ಈ ಸಮಾವೇಶ ನಡೆಯುತ್ತಿದೆ. ‘ನಾವೆಲ್ಲರೂ ಒಂದು, ನಾವೆಲ್ಲರೂ ಹಿಂದೂ’ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರೂ ಒಂದಾಗಿ ಭಾಗವಹಿಸಬೇಕು” ಎಂದು ಉಡಚಪ್ಪ ಹಳ್ಳಿಕೇರಿ ಹೇಳಿದರು.

ಇದೇ ವೇಳೆ ತೋಂಟದಾರ್ಯ ಮಠದ ವಿಚಾರ ಪ್ರಸ್ತಾಪಿಸಿದ ಅವರು, ಮಠದ ಬಗ್ಗೆ ಅಪಾರ ಗೌರವ ಹಾಗೂ ಭಕ್ತಿ ಇದೆ. ಆದರೆ ಕೆಲವರು ತೋಂಟದಾರ್ಯ ಮಠವನ್ನು ಒಂದು ಜಾತಿಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮನ್ನು ತಾವು ಚಿಂತಕರು ಎಂದು ಕರೆದುಕೊಳ್ಳುವವರು ಅನಗತ್ಯ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಕೊಟ್ಟಿಕಲ್, ಕುಮಾರ ನಡಗೇರಿ, ಸತೀಶ್ ಕುಂಬಾರ, ರಾಘವೇಂದ್ರ ಪರಾಪೂರ, ಪಿ.ಎಸ್. ಕಾಳೆ, ಮೌನೇಶ್ ದಾಸರ, ಹುಲಗಪ್ಪ ವಾಲ್ಮೀಕಿ, ಅಶೋಕ ಭಜಂತ್ರಿ, ಈರಪ್ಪ ವಾಲ್ಮೀಕಿ, ಮಂಜುನಾಥ ಗುಡಿ, ಮಂಜುನಾಥ ಪೂಜಾರ, ಸ್ವರೂಪ ಹುಳ್ಳಿಕಾಶಿ ಹಾಗೂ ವೆಂಕಟೇಶ್ ದೊಡ್ಡಮನಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande