ಮೇ 31ರಂದು ಗದಗದಲ್ಲಿ ಬೃಹತ್ ಹಿಂದೂ ಸಮಾವೇಶ ಮಹಿಳೆಯರ ಭಾರಿ ಕುಂಭ ಮೆರವಣಿಗೆಗೆ ಸಿದ್ಧತೆ
ಕಚೇ ರಿ
ಫೋಟೋ


ಗದಗ, 24 ಮೇ (ಹಿ.ಸ.) :

ಆ್ಯಂಕರ್ : ಗದಗ ನಗರದ ವಿ.ಡಿ.ಎಸ್.ಟಿ.ಸಿ ಮೈದಾನದಲ್ಲಿ ಮೇ 31ರಂದು ಕಣ್ಣೀರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾವೇಶಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಿತಿಯ ಮಹಿಳಾ ಸಂಚಾಲಕಿ ವಿಜಯಲಕ್ಷ್ಮೀ ಮಾನ್ವಿ ಕರೆ ನೀಡಿದರು.

ನಗರದ ನಗರೇಶ್ವರ ದೇವಸ್ಥಾನದಲ್ಲಿ ಅಧಿಕ ಮಾಸದ ಪ್ರಯುಕ್ತ ಹಿಂದೂ ಆರ್ಯ ವೈಶ್ಯ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧಾರ್ಮಿಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ವೇಳೆ ಮಾತನಾಡಿದ ವಿಜಯಲಕ್ಷ್ಮೀ ಮಾನ್ವಿ, “ಹಿಂದೂಗಳನ್ನು ಒಗ್ಗೂಡಿಸುವುದು ಹಾಗೂ ಧಾರ್ಮಿಕ, ಸಾಂಸ್ಕೃತಿಕ ಮೌಲ್ಯಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಈ ಬೃಹತ್ ಹಿಂದೂ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಕಣ್ಣೀರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ಮೊದಲ ಬಾರಿಗೆ ಗದಗ ನಗರಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದ್ದು, ಅವರ ಹಿಂದುತ್ವದ ವಿಚಾರಧಾರೆ ಹಾಗೂ ಧಾರ್ಮಿಕ ಸಂದೇಶಗಳನ್ನು ಆಲಿಸಲು ಜನರು ಕಾತರದಿಂದ ಕಾಯುತ್ತಿದ್ದಾರೆ” ಎಂದು ಹೇಳಿದರು.

ಇದೇ ವೇಳೆ ಸನಾತನ ಧರ್ಮದ ಉಳಿವು, ಧಾರ್ಮಿಕ ಮೌಲ್ಯಗಳ ರಕ್ಷಣೆ ಹಾಗೂ ರೈತಾಪಿ ವರ್ಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ಧಾರ್ಮಿಕ ಜಾಗೃತಿ ಹಾಗೂ ಸಂಘಟಿತ ಮನೋಭಾವ ಬೆಳೆಸುವ ಅಗತ್ಯವಿದ್ದು, ವಿವಿಧ ರೀತಿಯ ಸವಾಲುಗಳ ನಡುವೆಯೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಮೇ 31ರಂದು ನಡೆಯಲಿರುವ ಸಮಾವೇಶದ ಅಂಗವಾಗಿ ನಗರದ ಭೂಮರೆಡ್ಡಿ ಸರ್ಕಲ್ನಿಂದ ಮಧ್ಯಾಹ್ನ 3.30 ಗಂಟೆಗೆ ಭವ್ಯ ಕುಂಭಮೆರವಣಿಗೆ ಆಯೋಜಿಸಲಾಗಿದೆ. ಸುಮಾರು 2000ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿರುವ ಈ ಮೆರವಣಿಗೆ ನಗರದ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಸಂಚರಿಸಿ ಸಂಜೆ 5.30ಕ್ಕೆ ವಿ.ಡಿ.ಎಸ್.ಟಿ.ಸಿ ಮೈದಾನ ತಲುಪಲಿದೆ ಎಂದು ಮಾಹಿತಿ ನೀಡಿದರು.

ಈ ಕುಂಭಮೆರವಣಿಗೆಯು ಸಮಾವೇಶದ ವಿಶೇಷ ಆಕರ್ಷಣೆಯಾಗಲಿದ್ದು, ಮಹಿಳೆಯರು ಸಾಂಪ್ರದಾಯಿಕ ವೇಷಭೂಷಣದಲ್ಲಿ ಪಾಲ್ಗೊಂಡು ಧಾರ್ಮಿಕ ಭಕ್ತಿ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಮಾವೇಶದಲ್ಲಿ 25 ಸಾವಿರದಿಂದ 30 ಸಾವಿರಕ್ಕೂ ಅಧಿಕ ಹಿಂದೂ ಬಾಂಧವರು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ಭಾಗಗಳಿಂದ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ. ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಪೂರ್ವಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಇದೇ ಸಂದರ್ಭದಲ್ಲಿ ನಡೆದ ನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಸುಮಾರು 132 ಮುತೈದೆಯರಿಗೆ ಉಡಿ ತುಂಬುವ ಸಂಪ್ರದಾಯ ನೆರವೇರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮ ಭಕ್ತಿಪೂರ್ಣ ವಾತಾವರಣಕ್ಕೆ ಸಾಕ್ಷಿಯಾಯಿತು.

ಕನ್ನಿಕಾ ರಾಯಚೂರ ಹಾಗೂ ಮಾಧುರಿ ರಾಯಚೂರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ರೇಖಾ ಜಡಿ, ಅನಿತಾ ಹೆಬಸೂರ, ದೀಪಾ ಬಳ್ಳಾರಿ, ಸುಧಾ ಮುತ್ತಗಿ, ಕಲಾವತಿ ಅಬಲೂರ್, ವೇಧಾ ಕಾಲವಾಡ್ ಸೇರಿದಂತೆ ಅನೇಕ ಮಹಿಳಾ ಮುಖಂಡರು, ಸಮಾಜದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಬೃಹತ್ ಹಿಂದೂ ಸಮಾವೇಶದ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಈಗಾಗಲೇ ಧಾರ್ಮಿಕ ಚಟುವಟಿಕೆಗಳು ಗರಿಗೆದರಿದ್ದು, ಮಹಿಳೆಯರ ಕುಂಭಮೆರವಣಿಗೆ ಹಾಗೂ ಕಾಡಸಿದ್ದೇಶ್ವರ ಶ್ರೀಗಳ ಆಗಮನದ ಬಗ್ಗೆ ಭಕ್ತರಲ್ಲಿ ವಿಶೇಷ ಉತ್ಸಾಹ ಕಂಡು ಬರುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande