
ಗದಗ, 24 ಮೇ (ಹಿ.ಸ.) :
ಆ್ಯಂಕರ್ : ಮೊನ್ನೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಸಿಲುಕಿ ಮೃತಪಟ್ಟ ನಗರದ ಒಕ್ಕಲಿಗೇರಿ ಓಣಿಯ ನಿವಾಸಿ, ಕುರಿಗಾಯಿ ಮರಿತಮ್ಮಪ್ಪ ಗಿಡ್ಡಹನುಮಣ್ಣವರ ಅವರ ನಿವಾಸಕ್ಕೆ ಜೆಡಿಎಸ್ ಪಕ್ಷದ ನಿಯೋ ಇಂದು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿತು.
ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ನೇತೃತ್ವದ ನಿಯೋಗ ಮೃತರ ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳನ್ನು ಭೇಟಿ ಮಾಡಿ ಕುಟುಂಬದ ದುಃಖದಲ್ಲಿ ಪಾಲ್ಗೊಂಡಿತು. ಇದೇ ವೇಳೆ ಕುಟುಂಬಕ್ಕೆ ಅಗತ್ಯ ನೆರವು ದೊರಕಿಸಿಕೊಡುವ ನಿಟ್ಟಿನಲ್ಲಿ ಪಕ್ಷದಿಂದಲೂ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಲಾಯಿತು.
ಮೃತ ಮರಿತಮ್ಮಪ್ಪ ಅವರ ತಂದೆ ಪಾರ್ಶ್ವವಾಯು ಪೀಡಿತರಾಗಿದ್ದು, ಜೀವನ ನಿರ್ವಹಣೆಗೆ ಪುತ್ರನ ಮೇಲೆಯೇ ಸಂಪೂರ್ಣ ಅವಲಂಬಿತರಾಗಿದ್ದರು. ತಾಯಿಯೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆಯ ಸಂಪೂರ್ಣ ಜವಾಬ್ದಾರಿ ಮರಿತಮ್ಮಪ್ಪ ಅವರ ಹೆಗಲ ಮೇಲಿತ್ತು. ಆದರೆ ಅವರ ಅಕಾಲಿಕ ನಿಧನದಿಂದ ಕುಟುಂಬ ಈಗ ದಿಕ್ಕುತೋಚದ ಸ್ಥಿತಿಗೆ ತಲುಪಿದ್ದು, ಜೀವನೋಪಾಯದ ದೊಡ್ಡ ಸಂಕಷ್ಟ ಎದುರಾಗಿದೆ ಎಂದು ನಿಯೋಗ ಸದಸ್ಯರು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ, “ಇಂತಹ ದುರ್ಘಟನೆ ಸಂಭವಿಸಿದಾಗ ಜಿಲ್ಲಾಡಳಿತ ಮಾನವೀಯತೆ ತೋರಿಸಿ ತಕ್ಷಣ ಸ್ಪಂದಿಸಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಆರ್ಥಿಕ ನೆರವು ನೀಡುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗಬೇಕು. ಜೆಡಿಎಸ್ ಪಕ್ಷವೂ ಕುಟುಂಬಕ್ಕೆ ಸರ್ಕಾರದ ಸೌಲಭ್ಯಗಳು ಹಾಗೂ ನೆರವು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದೆ” ಎಂದು ಹೇಳಿದರು.
ಭಾರಿ ಮಳೆ ಮತ್ತು ಗಾಳಿಯಿಂದ ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡಿರುವ ಹಿನ್ನೆಲೆ, ಸರ್ಕಾರ ಹಾಗೂ ಜಿಲ್ಲಾಡಳಿತ ವಿಶೇಷ ಗಮನಹರಿಸಿ ಸಂತ್ರಸ್ತ ಕುಟುಂಬಕ್ಕೆ ತುರ್ತು ನೆರವು ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೀರನಗೌಡ ನಾಡಗೌಡ, ಬಸವರಾಜ ಅಪ್ಪಣ್ಣನವರ, ಮಂಜುನಾಥ ಗುಡ್ಡೀನ್, ಬೂದೇಶ್ ಮಜ್ಜಿಗೂಡು, ಪ್ರಫುಲ್ ಪುಣೇಕರ, ಪ್ರಭುರಾಜಗೌಡ ಪಾಟೀಲ್, ವಿರೂಪಾಕ್ಷಯ್ಯ ಹಿರೇಮಠ, ಶ್ರೀಪತಿಶಗೌಡ, ಸತೀಶ ಗಿಡಹನುಮಣ್ಣನವರ್ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP