
ಗದಗ, 24 ಮೇ (ಹಿ.ಸ.) :
ಆ್ಯಂಕರ್ : ರಾಜ್ಯಾದ್ಯಂತ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ದಿನಗಣನೆ ಶುರುವಾಗಿರುವ ನಡುವೆಯೇ ಗದಗ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿ ಆತಂಕ ಹುಟ್ಟಿಸುವಂತಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಹಲವು ಸರ್ಕಾರಿ ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದು, ಶಾಲೆ ಆರಂಭಕ್ಕೂ ಮುನ್ನವೇ ದುರಸ್ತೆ ಕಾರ್ಯ ಕೈಗೊಳ್ಳಬೇಕು ಎಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.
ಗದಗ ತಾಲೂಕಿನ ಶಿರುಂಜ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಳೆ ಮತ್ತು ಬಿರುಗಾಳಿಯಿಂದ ಸಂಭವಿಸಿರುವ ಹಾನಿ ಪರಿಸ್ಥಿತಿಯ ಗಂಭೀರತೆಯನ್ನು ಬಯಲಿಗೆಳೆದಿದೆ. ಶಾಲೆಯ ಮೇಲ್ಛಾವಣಿಯ ಮೇಲೆ ಬೃಹತ್ ಮರದ ಕೊಂಬೆ ಬಿದ್ದ ಪರಿಣಾಮ ಏಳು ತರಗತಿ ಕೊಠಡಿಗಳ ಪೈಕಿ ಮೂರು ಕೊಠಡಿಗಳಿಗೆ ತೀವ್ರ ಹಾನಿಯಾಗಿದೆ. ಮೇಲ್ಛಾವಣಿಯ ತಗಡುಗಳು ಮುರಿದು ಹೋಗಿದ್ದು, ಕೆಲವು ತಗಡುಗಳು ಹಾರಿ ಹೋಗಿರುವ ಕಾರಣ ಶಾಲಾ ಕಟ್ಟಡ ಅಪಾಯದ ಸ್ಥಿತಿಗೆ ತಲುಪಿದೆ.
ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭವಾಗಲಿದ್ದು, ಮಕ್ಕಳು ತರಗತಿಗಳಿಗೆ ಆಗಮಿಸಲಿದ್ದಾರೆ. ಆದರೆ ಈ ರೀತಿಯ ಹಾನಿಗೊಳಗಾದ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ಹೇಳುವುದು ಹಾಗೂ ಸುರಕ್ಷಿತ ವಾತಾವರಣದಲ್ಲಿ ಶಿಕ್ಷಣ ನೀಡುವುದು ಹೇಗೆ ಎಂಬ ಪ್ರಶ್ನೆ ಈಗ ಪೋಷಕರು ಮತ್ತು ಗ್ರಾಮಸ್ಥರನ್ನು ಕಾಡುತ್ತಿದೆ.
1ರಿಂದ 7ನೇ ತರಗತಿ ವರೆಗೆ ನಡೆಯುವ ಈ ಸರ್ಕಾರಿ ಶಾಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಮೂರು ಕೊಠಡಿಗಳು ಬಳಕೆಗೆ ಯೋಗ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ತರಗತಿ ಕೊಠಡಿಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಕೆಲವು ಭಾಗಗಳಲ್ಲಿ ಗೋಡೆಗಳಿಗೂ ಹಾನಿಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಗ್ರಾಮಸ್ಥ ಬಸವರಾಜ್ ಮಾತನಾಡಿ, “ಮಳೆ-ಗಾಳಿಗೆ ಶಾಲೆ ಕಟ್ಟಡ ಹಾನಿಯಾಗಿದೆ. ಇನ್ನೇನು ಶಾಲೆ ಆರಂಭವಾಗಲಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಕ್ಷಣವೇ ದುರಸ್ತಿ ಕಾರ್ಯ ಮಾಡಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಬೇಕು” ಎಂದು ಒತ್ತಾಯಿಸಿದರು.
ಶಿರುಂಜ ಗ್ರಾಮದಷ್ಟೇ ಅಲ್ಲದೆ, ಗದಗ ಜಿಲ್ಲೆಯ ವಿವಿಧ ಭಾಗಗಳಲ್ಲಿಯೂ ಸರ್ಕಾರಿ ಶಾಲೆಗಳು ಮಳೆ ಹಾಗೂ ಗಾಳಿಗೆ ತುತ್ತಾಗಿವೆ. ಜಿಲ್ಲಾ ಮಟ್ಟದ ಮಾಹಿತಿ ಪ್ರಕಾರ, ಜಿಲ್ಲೆಯಾದ್ಯಂತ ಸುಮಾರು 14 ಸರ್ಕಾರಿ ಶಾಲೆಗಳು ಹಾನಿಗೊಳಗಾಗಿವೆ ಎನ್ನಲಾಗಿದೆ. ಕೆಲ ಶಾಲೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದರೆ, ಇನ್ನೂ ಕೆಲವು ಶಾಲೆಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಕೆಲವು ಶಾಲೆಗಳಲ್ಲಿ ಮಳೆ ನೀರು ಒಳನುಗ್ಗುವ ಭೀತಿಯೂ ಎದುರಾಗಿದೆ.
ಇದರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಹೊತ್ತಿಗೆ ಮಕ್ಕಳಿಗೆ ಸುರಕ್ಷಿತ ಹಾಗೂ ಅನುಕೂಲಕರ ಕಲಿಕಾ ವಾತಾವರಣ ಕಲ್ಪಿಸುವುದು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸ್ಥಳೀಯ ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ಕೂಡಲೇ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಶಾಲೆ ಆರಂಭವಾದ ನಂತರ ಕಾಮಗಾರಿ ನಡೆಸಿದರೆ ಮಕ್ಕಳ ಕಲಿಕೆಗೆ ಅಡಚಣೆ ಉಂಟಾಗುತ್ತದೆ. ಹೀಗಾಗಿ ಶಾಲೆಗಳು ಪುನರಾರಂಭವಾಗುವ ಮೊದಲು ಕಟ್ಟಡಗಳ ದುರಸ್ತಿ ಪೂರ್ಣಗೊಳಿಸಿ, ಸುರಕ್ಷಿತ ಪರಿಸರ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮಸ್ಥ ಅಜಯ್ ಪ್ರತಿಕ್ರಿಯಿಸಿ, “ಸರ್ಕಾರಿ ಶಾಲೆಗಳತ್ತ ಈಗಾಗಲೇ ಮಕ್ಕಳ ಆಕರ್ಷಣೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಇಂತಹ ಅವ್ಯವಸ್ಥೆಗಳು ಇನ್ನಷ್ಟು ಹಿನ್ನಡೆ ಉಂಟುಮಾಡುತ್ತವೆ. ಬಡ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ಧಕ್ಕೆಯಾಗದಂತೆ ತಕ್ಷಣ ಕ್ರಮ ವಹಿಸಬೇಕು” ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳು ಸಾಮಾನ್ಯವಾಗಿ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣದ ಆಧಾರವಾಗಿವೆ. ಅಂತಹ ಶಾಲೆಗಳಲ್ಲೇ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಕಟ್ಟಡ ಹಾನಿ ಕಂಡುಬಂದರೆ, ಅದರ ನೇರ ಪರಿಣಾಮ ಮಕ್ಕಳ ಕಲಿಕೆ ಮತ್ತು ಹಾಜರಾತಿ ಮೇಲೆಯೇ ಬೀಳಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡು ಶಾಲೆ ಆರಂಭಕ್ಕೂ ಮುನ್ನವೇ ಹಾನಿಗೊಳಗಾದ ಶಾಲೆಗಳ ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಮಕ್ಕಳ ಸುರಕ್ಷತೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP