
ಗದಗ, 24 ಮೇ (ಹಿ.ಸ.) :
ಆ್ಯಂಕರ್ : ಗದಗ-ಬೆಟಗೇರಿ ಅವಳಿ ನಗರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೆಟಗೇರಿಯಲ್ಲಿ ತಕ್ಷಣ ಪ್ರತ್ಯೇಕ ಸಾರಿಗೆ ಪೊಲೀಸ್ ಠಾಣೆ ಆರಂಭಿಸಬೇಕು ಎಂದು ಮುಖಂಡ ಸತೀಶ ಹುಲಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಟಗೇರಿ ಭಾಗದಲ್ಲಿ ವಾಹನಗಳ ಉಪಟಳ ಹೆಚ್ಚುತ್ತಿದ್ದು, ಸ್ಥಳೀಯ ನಿವಾಸಿಗಳು ನಿತ್ಯ ಸಂಚಾರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ನಿಯಂತ್ರಣರಹಿತ ವಾಹನ ಸಂಚಾರದಿಂದ ಅಪಘಾತಗಳ ಪ್ರಮಾಣ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ಹುಯಿಲಗೋಳ ಕ್ರಾಸ್, ಬೆಟಗೇರಿ ಬಸ್ ನಿಲ್ದಾಣ ಸೇರಿದಂತೆ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಕೆಲವೊಮ್ಮೆ ಸಾವಿನ ಪ್ರಕರಣಗಳೂ ದಾಖಲಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ಪ್ರಸ್ತುತ ಸಾರಿಗೆ ನಿಯಂತ್ರಣಕ್ಕೆ ಸಮರ್ಪಕ ವ್ಯವಸ್ಥೆಯ ಕೊರತೆಯಿಂದ ವಾಹನ ದಟ್ಟಣೆ ನಿಯಂತ್ರಿಸುವುದು ಕಷ್ಟಕರವಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಟಗೇರಿ ಭಾಗಕ್ಕೆ ಪ್ರತ್ಯೇಕ ಸಾರಿಗೆ ಪೊಲೀಸ್ ಠಾಣೆ ಅತ್ಯವಶ್ಯಕವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವತಃ ಸ್ಥಳ ಪರಿಶೀಲನೆ ನಡೆಸಿ, ಪ್ರದೇಶದ ಜನಸಂಚಾರ, ವಾಹನ ದಟ್ಟಣೆ ಹಾಗೂ ಸಾರ್ವಜನಿಕ ಅಗತ್ಯತೆಗಳನ್ನು ಪರಿಗಣಿಸಿ ಬೆಟಗೇರಿಯಲ್ಲಿ ಸಾರಿಗೆ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಆಗ್ರಹಿಸಲಾಗಿದೆ.
ಈ ಒತ್ತಾಯಕ್ಕೆ ಆರ್.ಎಲ್. ಮೇಳೆನ್ನವರ, ಮಹಾದೇವ ಚಲವಾದಿ, ಗುರುಮೂರ್ತಿ ಚಲವಾದಿ, ಬೂದಪ್ಪ ಹುಣಸೀಮರದ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಗೂ ನಾಗರಿಕರು ಬೆಂಬಲ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP