
ಬೆಂಗಳೂರು, 24 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರತಿ ಪಕ್ಷದ ನಾಯಕ ಆರ್.ಅಶೋಕ, ಬಯಲು ಸೀಮೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವೇ “ದೊಡ್ಡ ಬರ”ವಾಗಿ ಪರಿಣಮಿಸಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ಅವರು, ಕಳೆದ ಆರು ವರ್ಷಗಳಲ್ಲಿ 2,460ಕ್ಕೂ ಹೆಚ್ಚು ಕಾಮಗಾರಿಗಳಿಗೆ ಇನ್ನೂ ಚಾಲನೆ ಸಿಗದೇ ಧೂಳು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.
ಬರಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ಸ್ಥಾಪಿತವಾಗಿರುವ ಮಂಡಳಿಯನ್ನೇ ಅನುದಾನದ ಕೊರತೆಯಿಂದ ಕುಂಠಿತಗೊಳಿಸಿರುವುದು ರಾಜ್ಯ ಸರ್ಕಾರದ ಘೋರ ವೈಫಲ್ಯ ಎಂದು ಅವರು ಆರೋಪಿಸಿದ್ದಾರೆ.
2025-26ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾದ 269 ಕಾಮಗಾರಿಗಳ ಪೈಕಿ ಕೇವಲ ಒಂದೇ ಒಂದು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ ಎಂದು ಅಶೋಕ್ ತಿಳಿಸಿದ್ದಾರೆ. 19.48 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಸರ್ಕಾರ ಕೇವಲ 12.25 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ ಎಂದು ಅವರು ದೂರಿದ್ದಾರೆ.
“ಇದು ಅಭಿವೃದ್ಧಿ ಸರ್ಕಾರವಲ್ಲ. ಇಲ್ಲಿ ಎಲ್ಲವೂ ಖಾಲಿ ಖಾಲಿ ಖಾಲಿ. ಖಾಲಿ ಖಜಾನೆ, ಖಾಲಿ ಭರವಸೆ, ಖಾಲಿ ಆಡಳಿತಕ್ಕೆ ರಾಜ್ಯ ಕಾಂಗ್ರೆಸ್ ದೇಶಕ್ಕೇ ಮಾದರಿಯಾಗಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿ, ಇದೀಗ ಬಯಲು ಸೀಮೆಯ ಜನರ ಭವಿಷ್ಯವನ್ನೇ ಬತ್ತಲು ಬಿಟ್ಟಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.