
ಗದಗ, 24 ಮೇ (ಹಿ.ಸ.) :
ಆ್ಯಂಕರ್ : ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ, ನೂರು ವರ್ಷಗಳ ಇತಿಹಾಸ ಹೊಂದಿದ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಇಂದು ಯಾವುದೇ ಸ್ಪಷ್ಟ ನೆಲೆ ಇಲ್ಲದ “ಕಾಕ್ರೋಚ್ ಜನತಾ ಪಕ್ಷ”ದಂತಹ ಆನ್ಲೈನ್ ಅಭಿಯಾನಗಳ ಆಸರೆ ಪಡೆಯುವ ಮಟ್ಟಕ್ಕೆ ಇಳಿದಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ತೀವ್ರ ವ್ಯಂಗ್ಯವಾಡಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪ್ರದರ್ಶಿಸಿದ ನಿಲುವು ಮತ್ತು “ಐ ಆ್ಯಮ್ ಕಾಕ್ರೋಚ್” ಎಂಬ ಟಿ-ಶರ್ಟ್ ಬಿಡುಗಡೆ ಘಟನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
“ನಮ್ಮದು ನೂರು ವರ್ಷಗಳ ಇತಿಹಾಸದ ಪಕ್ಷ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ, ರಾಷ್ಟ್ರ ರಾಜಕಾರಣದ ಪ್ರಮುಖ ಶಕ್ತಿ” ಎಂದು ಜಂಬ ಕೊಚ್ಚಿಕೊಳ್ಳುವ ಕಾಂಗ್ರೆಸ್ ನಾಯಕರು ಇಂದು ತಮ್ಮದೇ ರಾಜಕೀಯ ಬಲ ಮತ್ತು ಜನಬೆಂಬಲ ಕುಸಿದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ಅವರು ಹೇಳಿದರು.
ಮೊನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಸಚಿವ ಸಂಪುಟದ ಹಲವಾರು ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ “ಐ ಆ್ಯಮ್ ಕಾಕ್ರೋಚ್” ಟಿ-ಶರ್ಟ್ಗಳನ್ನು ಬಿಡುಗಡೆ ಮಾಡಿರುವುದು ಕಾಂಗ್ರೆಸ್ ಪಕ್ಷದ ದಿಕ್ಕುತೋಚದ ರಾಜಕಾರಣದ ಉದಾಹರಣೆಯಾಗಿದೆ ಎಂದು ಟೀಕಿಸಿದರು.
“ನಾವು ರಾಷ್ಟ್ರಭಕ್ತರು, ನಾವು ಗಾಂಧಿವಾದಿಗಳು” ಎಂದು ಬೀಗುತ್ತಿದ್ದ ಕಾಂಗ್ರೆಸ್ ನಾಯಕರು ಈಗ “ಐ ಆ್ಯಮ್ ಕಾಕ್ರೋಚ್” ಎಂಬ ಘೋಷಣೆಯನ್ನು ಅಪ್ಪಿಕೊಳ್ಳುತ್ತಿರುವುದು ದೇಶದ ಜನರ ಮುಂದೆ ನಗೆಪಾಟಲಿಗೆ ಕಾರಣವಾಗಿದೆ ಎಂದು ಗೋವಿಂದಗೌಡ್ರ ಹೇಳಿದರು.
ಕೇವಲ ಆನ್ಲೈನ್ ಮೂಲಕ ಹುಟ್ಟಿಕೊಂಡು ಕೆಲವೇ ದಿನಗಳಲ್ಲಿ ಚರ್ಚೆಗೆ ಬಂದಿರುವ “ಕಾಕ್ರೋಚ್ ಜನತಾ ಪಕ್ಷ”ದಂತಹ ಅಭಿಯಾನಗಳಿಗೆ ಕಾಂಗ್ರೆಸ್ ನಾಯಕರು ನೀಡುತ್ತಿರುವ ಪ್ರೋತ್ಸಾಹವು ಪಕ್ಷದ ರಾಜಕೀಯ ದೌರ್ಬಲ್ಯವನ್ನು ತೋರಿಸುತ್ತಿದೆ. ಕಾಂಗ್ರೆಸ್ ಪಕ್ಷವು ಆನ್ಲೈನ್ನಲ್ಲಿ ಹುಟ್ಟಿದ ಈ ಪ್ರಚಾರ ಮಾದರಿಯನ್ನು ಅನಧಿಕೃತವಾಗಿ ತನ್ನದಾಗಿಸಿಕೊಂಡಂತೆ ಕಾಣುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
ಅಕ್ಕಪಕ್ಕದ ದೇಶಗಳಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿಯೂ ಅಶಾಂತಿ ಹಾಗೂ ಗೊಂದಲದ ವಾತಾವರಣ ನಿರ್ಮಿಸಲು ಕೆಲವರು ಕನಸು ಕಾಣುತ್ತಿದ್ದಾರೆ. ಇಂತಹ ಪ್ರಯತ್ನಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸುವವರ ಬಗ್ಗೆ ದೇಶದ ಜನತೆ ಎಚ್ಚರಿಕೆಯಿಂದಿರಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ದೇಶದ ಯುವಜನತೆ ಸಾಕಷ್ಟು ಪ್ರಬುದ್ಧರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಆನ್ಲೈನ್ ಪ್ರಚಾರ, ಪ್ರಚೋದನಾತ್ಮಕ ಅಭಿಯಾನ ಅಥವಾ ರಾಜಕೀಯ ನಾಟಕಗಳಿಗೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ಹೇಳಿದರು.
ಪ್ರಸ್ತುತ ದೇಶ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕೆಲವು ರಾಜಕೀಯ ಶಕ್ತಿಗಳು ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿವೆ. ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಅಸ್ಥಿರತೆಯನ್ನು ಸೃಷ್ಟಿಸಲು ಯತ್ನಿಸುವವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಕೊನೆಯಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜನರ ಸಮಸ್ಯೆಗಳು, ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಯ ವಿಚಾರಗಳಲ್ಲಿ ಚರ್ಚೆ ನಡೆಸುವ ಬದಲು ವಿವಾದಾತ್ಮಕ ಅಭಿಯಾನಗಳಿಗೆ ಬೆಂಬಲ ನೀಡುವುದು ಕಾಂಗ್ರೆಸ್ ಪಕ್ಷದ ರಾಜಕೀಯ ದಿಕ್ಕುತೋಚದ ಪರಿಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP