
ಕೋಲಾರ, ೨೪ ಮೇ (ಹಿ.ಸ) :
ಆ್ಯಂಕರ್ : ದಂತಕ್ಷಯಕ್ಕೆ ಕಾರಣವಾಗುತ್ತಿರುವ ಪ್ಲೋರೋಸಿಸ್ನಂತಹ ಸಮಸ್ಯೆ ಕೋಲಾರ ಜಿಲ್ಲೆಯಲ್ಲಿ ಸಾಮಾನ್ಯವಾಗಿದ್ದು ಪ್ರತಿಂಯೊಬ್ಬರೂ ನಿಯಮಿತವಾಗಿ ದಂತ ತಪಾಸಣೆಗೆ ಒಳಗಾಗಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್ ಕರೆ ನೀಡಿದರು.
ನಗರದ ಅರಳೇಪೇಟೆಯ `ಡಾ.ರಕ್ಷಣ್ಸ್ ದಂತಿಕ' ಡೆಂಟಲ್ ಕ್ಲಿನಿಕ್ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಸಂಸ್ಥಾಪನಾ ದಿನದ (೨೪-೦೫-೨೦೦೭) ಅಂಗವಾಗಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಂದರ ಹಲ್ಲುಗಳು ಆರೋಗ್ಯದ ಲಕ್ಷಣವಾಗಿದ್ದು, ದಂತಗಳ ಸ್ವಚ್ಚತೆ ಮತ್ತು ಆರೋಗ್ಯಕ್ಕೆ ಒತ್ತು ನೀಡಿ, ಕಾಲಕಾಲಕ್ಕೆ ದಂತ ತಪಾಸಣೆಗೆ ಒಳಗಾಗಬೇಕು. ನಮ್ಮ ದೇಹಕ್ಕೆ ಅಗತ್ಯವಾದ ಆಹಾರ ಬಾಯಿಯ ಮೂಲಕವೇ ಹೋಗಬೇಕು, ಈ ನಿಟ್ಟಿನಲ್ಲಿ ಹಲ್ಲುಗಳು ಪ್ರಮುಖ ಪಾತ್ರವಹಿಸುತ್ತವೆ, ಹಲ್ಲುಗಳ ಆರೋಗ್ಯ ಇಂದು ಸವಾಲಾಗಿದೆ ಎಂದ ಅವರು, ಪ್ಲೋರೋಸಿಸ್ನಂತಹ ಸಮಸ್ಯೆ ಕೋಲಾರ ಜಿಲ್ಲೆಯಲ್ಲಿ ಸಾಮಾನ್ಯವಾಗಿರುವುದರಿಂದ ವಿಶೇಷ ಆರೈಕೆ ಹಾಗೂ ಮುನ್ನೆಚ್ಚರಿಕೆ ಅಗತ್ಯ ಎಂದರು.
ದAತರಕ್ಷಣೆ ಜತೆಗೆ ಪತ್ರಕರ್ತರು ಆರೋಗ್ಯದ ಕಡೆಯೂ ಗಮನ ನೀಡಬೇಕು. ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ಡಯಾಬೀಟೀಸ್, ರಕ್ತದೊತ್ತಡದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು, ನಿಮ್ಮ ಆಹಾರ ಪದ್ದತಿಯಲ್ಲಿ ಉತ್ತಮ ಪೋಷ್ಟಿಕಾಂಶಗಳು ಇರಲಿ. ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ಹಾಗೂ ಇತರೇ ವೃತ್ತಿಪರರು ಆರೋಗ್ಯದ ಕಡೆಯೂ ಗಮನಹರಿಸಬೇಕು ಎಂದು ಸಲಹೆ ನೀಡಿ, ಹಸಿರು ಸೊಪ್ಪು,ತರಕಾರಿ ಸೇವಿಸಿ, ಜಂಕ್ಫುಡ್ ಸೇವನೆ ಬೇಡ ಎಂದು ಸಲಹೆ ನೀಡಿದರು.
ರಕ್ಷಣ್ ದಂತಿಕ ಕ್ಲಿನಿಕ್ನ ವೈದ್ಯ ಡಾ.ರಕ್ಷಣ್ ಮಾತನಾಡಿ, ದಂತಗಳ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ. ಇತರೆಲ್ಲಾ ಆರೋಗ್ಯ ಸಮಸ್ಯೆಗಳಂತೆ ಹಲ್ಲುಗಳ ಸಮಸ್ಯೆಯೂ ಹೆಚ್ಚಿನ ಜನರನ್ನು ಕಾಡುತ್ತಿದೆ ಎಂದ ಅವರು, ಉತ್ತಮ ಚಿಕಿತ್ಸೆಗೆ ಬೆಂಗಳೂರಿಗೆ ಹೋಗಬೇಕು ಎನ್ನುವ ಮನೋಭಾವ ತೊರೆದು ಕೋಲಾರದ ನಮ್ಮ ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳು ಇದ್ದು ಇದರ ಸದುಪಯೋಗ ಪಡೆಯಲು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸಹಕಾರ ಸಂಘದ ಮೂಲಕ ಈಗಾಗಲೇ ಯಶಸ್ವಿನಿ ಯೋಜನೆಯಡಿ ಪತ್ರಕರ್ತರ ಆರೋಗ್ಯ ಸಮಸ್ಯೆಗೆ ವಿಮಾ ಯೋಜನೆಗೆ ಅವಕಾಶ ಕಲ್ಪಿಸಲಾಗಿದೆ, ಇದರ ಸೌಲಭ್ಯವನ್ನು ಮತ್ತಷ್ಟು ಪತ್ರಕರ್ತರು ಪಡೆದುಕೊಳ್ಳಬೇಕು ಎಂದರು.
ಈ ನಡುವೆ ಸಹಕಾರ ಸಂಘದ ಮನವಿಗೆ ಸ್ಪಂದಿಸಿ ಡಾ.ರಕ್ಷಣ್ ಪತ್ರಕರ್ತರಿಗೆ ಉಚಿತ ದಂತ ತಪಾಸಣೆ ನಡೆಸಲು ಒಪ್ಪಿದ್ದು, ಜಿಲ್ಲೆಯ ಪತ್ರಕರ್ತರು ಇದರ ಪ್ರಯೋಜನ ಪಡೆದುಕೊಳ್ಳಲು ಕೋರಿದ ಅವರು, ಆರೋಗ್ಯ ಹಾಗೂ ದಂತ ನೇತ್ರಗಳ ಸಮಸ್ಯೆ ಕುರಿತು ಉದಾಸೀನ ಬೇಡ. ಸಂಘವು ಯಶಸ್ವಿಯಾಗಿ ೨೦ ವರ್ಷಗಳನ್ನು ತಲುಪಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದಲೇ ಪತ್ರಕರ್ತರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸುವ ಶಿಬಿರವನ್ನು ಆಯೋಜಿಸಲಾಗುವುದು ಎಂದರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಪತ್ರಕರ್ತರು ಮತ್ತು ಅವರ ಕುಟುಂಬದವರು ದಂತ ತಪಾಸಣೆ ಮಾಡಿಸಿಕೊಂಡಿದ್ದು, ಅಗತ್ಯವಿರುವ ಪತ್ರಕರ್ತರಿಗೆ ಉಚಿತ ಮತ್ತು ರಿಯಾಯತಿ ದರದಲ್ಲಿ ಚಿಕಿತ್ಸೆಯ ಭರವಸೆಯನ್ನೂ ನೀಡಲಾಯಿತು. ಡಾ.ರಕ್ಷಣ್ ಅವರೊಂದಿಗೆ ಇತರೆ ದಂತ ವೈದ್ಯರಾದ ಡಾ.ಗೌತಮ್, ಡಾ.ವಿಶ್ವಾಸ್, ಡಾ.ಪವನ್, ಡಾ.ಜಯಸೂರ್ಯ ತಪಾಸನೆ ನಡೆಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ಕುಮಾರ್, ಖಜಾಂಚಿ ರಾಜೇಂದ್ರ ಸಿಂಹ, ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಕಾರ್ಯದರ್ಶಿ ಗಂಗಾಧರ್, ಹಿರಿಯ ಪತ್ರಕರ್ತರಾದ ಬಿ.ಸುರೇಶ್, ಸಚ್ಚಿದಾನಂದ್, ಪುಲಿಮುರಳೀಧರ್, ಚಾಂದ್ಪಾಷಾ, ಸಿ.ವಿ.ನಾಗರಾಜ್, ಶಿವು, ನ್ಯೂಸ್ ಚಂದ್ರು, ಮದನ್, ಪುರುಷೋತ್ತಮ್, ವಿಜಯಕುಮಾರ್, ಆಸಿಫ್ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್