ಕಾರ್ಮಿಕರಿಗೆ ಭರ್ಜರಿ ಕೊಡುಗೆ ; ಕನಿಷ್ಠ ವೇತನದಲ್ಲಿ ಶೇ.60ರಷ್ಟು ಹೆಚ್ಚಳ
ರಾಜ್ಯ ಸರ್ಕಾರದಿಂದ ಅಧಿಸೂಚನೆ ಪ್ರಕಟ; ಒಂದು ಕೋಟಿಗೂ ಹೆಚ್ಚು ಕಾರ್ಮಿಕರಿಗೆ ಲಾಭ
Labour file photo


ಬೆಂಗಳೂರು, 23 ಮೇ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇ.60ರಷ್ಟು ಹೆಚ್ಚಳ ಮಾಡಿ ಮಹತ್ವದ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಾಜ್ಯದ ಒಂದು ಕೋಟಿಗೂ ಹೆಚ್ಚು ಕಾರ್ಮಿಕರಿಗೆ ಆರ್ಥಿಕವಾಗಿ ದೊಡ್ಡ ನೆರವು ದೊರಕಲಿದ್ದು, ಕಾರ್ಮಿಕ ಇಲಾಖೆ ಮೂಲಕ ಸರ್ಕಾರ ಮತ್ತೊಂದು ಮಹತ್ವದ ಕೊಡುಗೆ ನೀಡಿದೆ.

ಈ ಹೊಸ ಅಧಿಸೂಚನೆ ಅಸಂಘಟಿತ ಹಾಗೂ ನಿರ್ದಿಷ್ಟ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನ ಒದಗಿಸಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಈ ವೇತನ ಪರಿಷ್ಕರಣೆ ಜಾರಿಗೆ ತರಲಾಗಿದೆ.

ಈ ಬಾರಿಯ ವೇತನ ಪರಿಷ್ಕರಣೆಯ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಎಲ್ಲ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯ ವ್ಯಾಪ್ತಿಗೆ ತರಲಾಗಿದೆ. ಈ ಹಿಂದೆ ಇದ್ದ ನಾಲ್ಕು ವಲಯಗಳ ವರ್ಗೀಕರಣವನ್ನು ಪರಿಷ್ಕರಿಸಿ ಮೂರು ವಲಯಗಳಾಗಿ ಮರುವಿಂಗಡಣೆ ಮಾಡಲಾಗಿದೆ.

ಹೊಸ ಅಧಿಸೂಚನೆಯಡಿ ಖಾಸಗಿ ಶಾಲೆ–ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಇ-ಕಾಮರ್ಸ್ ಕ್ಷೇತ್ರದ ನೌಕರರು, ಕೋರಿಯರ್ ಸಂಸ್ಥೆಗಳ ಸಿಬ್ಬಂದಿ ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರೂ ಸೇರಿದ್ದಾರೆ. ಒಟ್ಟಾರೆ ರಾಜ್ಯದ 81ಕ್ಕೂ ಹೆಚ್ಚು ಅನುಸೂಚಿತ ಉದ್ಯೋಗ ವಲಯಗಳ ಕಾರ್ಮಿಕರಿಗೆ ಇದರ ಲಾಭ ದೊರೆಯಲಿದೆ.

ಕನಿಷ್ಠ ವೇತನ ಪರಿಷ್ಕರಣೆಗಾಗಿ ಹಲವು ವರ್ಷಗಳಿಂದ ಕಾರ್ಮಿಕ ಸಂಘಟನೆಗಳು ಹಾಗೂ ಒಕ್ಕೂಟಗಳು ಒತ್ತಾಯಿಸುತ್ತಿದ್ದವು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆಗೆ ಸಂಕಷ್ಟ ಅನುಭವಿಸುತ್ತಿದ್ದ ಕಾರ್ಮಿಕರಿಗೆ ಈ ನಿರ್ಧಾರ ನೆರವಾಗಲಿದೆ ಎಂದು ಹೇಳಲಾಗಿದೆ.

ಪರಿಷ್ಕೃತ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಕಳೆದ ವರ್ಷದ ಏಪ್ರಿಲ್ 11ರಂದು ಪ್ರಕಟಿಸಲಾಗಿತ್ತು. 2016–17ರ ಬಳಿಕ ಇದೇ ಮೊದಲ ಬಾರಿಗೆ ಮಹತ್ವದ ಪರಿಷ್ಕರಣೆ ಜಾರಿಯಾಗಿದೆ.

ಹೊಸ ನಿಯಮದಂತೆ, ವಲಯ–3ರ ಕೌಶಲ್ಯರಹಿತ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ₹19,300ರವರೆಗೆ ಹಾಗೂ ವಲಯ–1ರ ಅತ್ಯಂತ ಕೌಶಲ್ಯಪೂರ್ಣ ಕಾರ್ಮಿಕರಿಗೆ ₹31,100ರವರೆಗೆ ಹೆಚ್ಚಳ ಮಾಡಲಾಗಿದೆ.

ಇದರಲ್ಲಿ ಎರಡು ವರ್ಷದ ₹1,030 ವೇರಿಯಬಲ್ ಡಿಯರ್ನೆಸ್ ಅಲವನ್ಸ್ (ವಿಡಿಎ) ಮೊತ್ತವನ್ನೂ ಸೇರಿಸಲಾಗಿದೆ.

ರಾಜ್ಯವನ್ನು ಮೂರು ವಲಯಗಳಾಗಿ ವಿಭಾಗಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರದೇಶ ವಲಯ–1ರಲ್ಲಿ, ಜಿಲ್ಲಾ ಕೇಂದ್ರಗಳು ವಲಯ–2ರಲ್ಲಿ ಹಾಗೂ ಉಳಿದ ಪ್ರದೇಶಗಳು ವಲಯ–3ರಲ್ಲಿ ಸೇರಿವೆ.

ಕನಿಷ್ಠ ವೇತನ ಹೆಚ್ಚಳದ ಅಧಿಸೂಚನೆ ಹೊರಡಿಸಿದ ದೇಶದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಇದೀಗ ಕರ್ನಾಟಕ ಪಾತ್ರವಾಗಿದೆ. ಈಗಾಗಲೇ ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳು ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದವು.

1991ರ ರೆಪ್ಟಕೋಸ್ ಬ್ರೆಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿಗಳ ಆಧಾರದ ಮೇಲೆ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಈ ಸಂಬಂಧ ವಿವಿಧ ಕಾರ್ಮಿಕ ಸಂಘಟನೆಗಳು, ಉದ್ಯೋಗದಾತರು, ತಜ್ಞರು ಹಾಗೂ ಕಾನೂನು ಪರಿಣಿತರೊಂದಿಗೆ ಹಲವು ಸುತ್ತಿನ ಸಭೆ ಹಾಗೂ ಸಮಾಲೋಚನೆ ನಡೆಸಿದ್ದರು.

ಅಂತಿಮವಾಗಿ ಅಧಿಸೂಚನೆ ಜಾರಿಯಾಗಿದ್ದು, ಕಾರ್ಮಿಕ ವಲಯದಿಂದ ಸಚಿವರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿ, “ಹೊಸ ಕನಿಷ್ಠ ವೇತನ ಜಾರಿಯಿಂದ ರಾಜ್ಯದ ಲಕ್ಷಾಂತರ ಕಾರ್ಮಿಕರಿಗೆ ಅನುಕೂಲವಾಗಲಿದೆ. ಇಎಸ್ಐ ಮತ್ತು ಪಿಎಫ್ ಕಡಿತದ ಬಳಿಕ ಕಡಿಮೆ ವೇತನ ಕೈಗೆ ಸಿಗುತ್ತಿದ್ದ ಪರಿಸ್ಥಿತಿ ಇತ್ತು. ಈ ಪರಿಷ್ಕರಣೆ ಕಾರ್ಮಿಕರ ಬದುಕಿಗೆ ಸಹಾಯವಾಗುವ ಕ್ರಾಂತಿಕಾರಕ ಕ್ರಮ” ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande