
ಬೆಂಗಳೂರು, 23 ಮೇ (ಹಿ.ಸ.) :
ಆ್ಯಂಕರ್ : ಗಾಂಧಿನಗರ ವಿಧಾನಸಭಾ ಕ್ಷೇತ್ರದ ದತ್ತಾತ್ರೇಯ ವಾರ್ಡ್ ನೇತಾಜಿ ನಗರಕ್ಕೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು, ತಾವು ಈ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 52 ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು ಎಂದು ನೆನಪಿಸಿಕೊಂಡರು. ಇದೀಗ ಅದೇ ಮಂಡಳಿಯ ಅನುದಾನದಡಿ ಆ ಎಲ್ಲಾ ಮನೆಗಳಿಗೆ ನೂತನ ಪೈಪ್ಲೈನ್ ಅಳವಡಿಕೆ ಸೇರಿದಂತೆ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನೂತನವಾಗಿ ನಿರ್ಮಿಸಲಾದ ಕೊಳವೆಬಾವಿ ನೀರು ಸರಬರಾಜು ಘಟಕವನ್ನು ಉದ್ಘಾಟಿಸಲಾಯಿತು.
ಘಟಕದಿಂದ ಪೂರೈಕೆಯಾಗುವ ನೀರನ್ನು ಸ್ವತಃ ಕುಡಿದು ಪರೀಕ್ಷಿಸಿದ ಸಚಿವರು, ನೀರು ಉತ್ತಮ ಗುಣಮಟ್ಟದ್ದಾಗಿದ್ದು ಸಿಹಿಯಾಗಿದೆ ಎಂದು ಹೇಳಿದರು.
ಈ ಹೊಸ ನೀರು ಸರಬರಾಜು ಘಟಕದಿಂದ ಸ್ಥಳೀಯ ನಿವಾಸಿಗಳಿಗೆ ಸಕಾಲದಲ್ಲಿ ಕುಡಿಯುವ ನೀರು ಲಭ್ಯವಾಗಲಿದ್ದು, ದಿನನಿತ್ಯದ ನೀರಿನ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಹಾಗೂ ನೀರು ಸರಬರಾಜು ಸುಗಮವಾಗಿರಬೇಕು ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.