ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ ಎಂಬ ಭಾವನೆ ಭಾರತೀಯತ್ವದ ಸಂಕೇತ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು
ಗದಗ, 23 ಮೇ (ಹಿ.ಸ.) : ಆ್ಯಂಕರ್ : ಭಾರತವು ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮ ಹಾಗೂ ಆಚರಣೆಗಳ ನೆಲೆಯಾಗಿದ್ದು, ವಿವಿಧತೆಯಲ್ಲಿಯೇ ಏಕತೆಯನ್ನು ಸಾರುವ ವಿಶ್ವದ ಅಪರೂಪದ ದೇಶವಾಗಿದೆ. ಬೇರೆ ಬೇರೆ ಧರ್ಮ, ಜಾತಿ, ಸಂಪ್ರದಾಯಗಳನ್ನು ಹೊಂದಿದ್ದರೂ ಸಹ “ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ” ಎಂಬ ಮನೋ
ಫೋಟೋ


ಗದಗ, 23 ಮೇ (ಹಿ.ಸ.) :

ಆ್ಯಂಕರ್ : ಭಾರತವು ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮ ಹಾಗೂ ಆಚರಣೆಗಳ ನೆಲೆಯಾಗಿದ್ದು, ವಿವಿಧತೆಯಲ್ಲಿಯೇ ಏಕತೆಯನ್ನು ಸಾರುವ ವಿಶ್ವದ ಅಪರೂಪದ ದೇಶವಾಗಿದೆ. ಬೇರೆ ಬೇರೆ ಧರ್ಮ, ಜಾತಿ, ಸಂಪ್ರದಾಯಗಳನ್ನು ಹೊಂದಿದ್ದರೂ ಸಹ “ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ” ಎಂಬ ಮನೋಭಾವನೆ ಭಾರತೀಯತ್ವದ ನಿಜವಾದ ಸಂಕೇತವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಗದಗ ನಗರದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ ಆಯೋಜಿಸಿದ್ದ 2798ನೇ ಶಿವಾನುಭವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಾರತೀಯ ಸಮಾಜದ ಸೌಹಾರ್ದತೆ, ಸಹಬಾಳ್ವೆ ಹಾಗೂ ಸಾಂಸ್ಕೃತಿಕ ವೈವಿಧ್ಯದ ಮಹತ್ವವನ್ನು ವಿವರಿಸಿದರು. ಬಂಜಾರ ಸಮಾಜದ ಸಂಸ್ಕೃತಿ, ಆಚರಣೆಗಳು ಹಾಗೂ ಜೀವನ ಪದ್ಧತಿ ಅತ್ಯಂತ ವಿಶಿಷ್ಟವಾಗಿದ್ದು, ಈ ಸಮುದಾಯ ಮೂಲತಃ ಪ್ರಕೃತಿ ಆರಾಧಕರಾಗಿದ್ದಾರೆ ಎಂದು ಶ್ರೀಗಳು ತಿಳಿಸಿದರು. ವಿವಿಧ ಸಮುದಾಯಗಳ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ಪರಸ್ಪರ ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳುವುದು ಸಮಾಜದ ಬೆಳವಣಿಗೆಗೆ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಎಂ.ಆರ್. ಚವ್ಹಾಣ ಅವರು ಮಾತನಾಡಿ, ಬಂಜಾರ ಸಮುದಾಯದ ಇತಿಹಾಸ ಮತ್ತು ವೈಭವದ ಕುರಿತು ಬೆಳಕು ಚೆಲ್ಲಿದರು. ಬಂಜಾರ ಸಮುದಾಯವು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ; ಇಡೀ ಏಷ್ಯಾ ಖಂಡದ ಅನೇಕ ಭಾಗಗಳಲ್ಲಿ ವ್ಯಾಪಿಸಿಕೊಂಡಿರುವ ಸಮುದಾಯವಾಗಿದೆ. ತಮ್ಮದೇ ಆದ ಸಂಸ್ಕೃತಿ, ಭಾಷೆ ಹಾಗೂ ಜೀವನ ಮೌಲ್ಯಗಳನ್ನು ಉಳಿಸಿಕೊಂಡು ಬಂದಿರುವ ಈ ಸಮುದಾಯದ ಪರಂಪರೆ ಅಧ್ಯಯನಕ್ಕೆ ಅರ್ಹವಾಗಿದೆ ಎಂದು ಹೇಳಿದರು.

ರವಿಕಾಂತ್ ಅಂಗಡಿ ಮಾತನಾಡಿ, ಬಂಜಾರ ಸಮಾಜದ ಮೂಲ ಇತಿಹಾಸ ಹಾಗೂ ಅವರ ಜೀವನ ಶೈಲಿಯನ್ನು ವಿವರಿಸಿದರು. ಬಂಜಾರರು ಮೂಲತಃ ಅಲೆಮಾರಿ ಜೀವನ ನಡೆಸುತ್ತಿದ್ದವರು. ಅನೇಕ ಶತಮಾನಗಳ ಕಾಲ ಆಧುನಿಕ ಜಗತ್ತಿನಿಂದ ದೂರವಿದ್ದು ತಮ್ಮದೇ ಆದ ಸಂಪ್ರದಾಯ ಮತ್ತು ಬದುಕಿನ ಕ್ರಮದಲ್ಲಿ ಜೀವನ ಸಾಗಿಸಿದವರು. ಗದಗ ಪ್ರದೇಶದಲ್ಲಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಬಂಜಾರ ಸಮಾಜದಲ್ಲಿ ಅಕ್ಷರಜ್ಞಾನ ಮೂಡಿಸುವ ಮೂಲಕ ಅವರನ್ನು ಮುಖ್ಯ ಸಮಾಜದ ಹರಿವಿಗೆ ತರಲು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವವನ್ನು ವಿವರಿಸಿದ ಡಾ. ಬಿ.ಎಲ್. ಚೌಹಾಣ್ ಅವರು, ಡಾ. ಕೆ.ಬಿ. ಪವಾರ ರಚಿಸಿರುವ ‘ಖೊಳಾ’ ಕೃತಿಯನ್ನು ಪರಿಚಯಿಸಿದರು. ಈ ಕೃತಿ ಬಂಜಾರ ಸಮುದಾಯದ ವಿಶಿಷ್ಟ ಸಂಸ್ಕೃತಿ, ಪರಂಪರೆ, ಆಚರಣೆ ಹಾಗೂ ಜೀವನ ಮೌಲ್ಯಗಳನ್ನು ಅಚ್ಚುಕಟ್ಟಾಗಿ ನಿರೂಪಿಸುವ ಮಹತ್ವದ ಕೃತಿಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀಕಾಂತ್ ಜಾದವ ಅವರು ಮಾತನಾಡಿ, ಬಂಜಾರ ಸಮುದಾಯದ ಮೂಲ, ಅವರ ದೇಶವ್ಯಾಪಿ ವಲಸೆ ಜೀವನ ಹಾಗೂ ಸಂತಶ್ರೀ ಸೇವಾಲಾಲ ಮಹಾರಾಜರ ಆದರ್ಶಗಳ ಕುರಿತು ಮಾತನಾಡಿದರು. ಬಂಜಾರ ಸಮುದಾಯದ ಹಿರಿಮೆ, ಗರಿಮೆ ಹಾಗೂ ಸಂಸ್ಕೃತಿಯ ಆಳವನ್ನು ಕಟ್ಟಿಕೊಡುವ ಕೊರಬೋಲಿ ಭಾಷೆಯಲ್ಲಿ ರಚಿತವಾದ ಈ ವಿಶೇಷ ಕೃತಿ ಸಮಾಜಕ್ಕೆ ಮಾರ್ಗದರ್ಶಕವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಕೆ.ಬಿ. ಪವಾರ ಅವರು ರಚಿಸಿದ ‘ಖೊಳಾ’ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಲೇಖಕರ ಪುತ್ರರಾದ ಡಾ. ನರೇಂದ್ರ ಪವಾರ, ಡಾ. ಕಿಶೋರ ಪವಾರ ಸೇರಿದಂತೆ ಬಂಜಾರ ಸಮುದಾಯದ ಅನೇಕ ಮುಖಂಡರು, ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಸಂಜನಾ ಎಂ. ಹದ್ಲಿ ಧರ್ಮಗ್ರಂಥ ಪಠಣ ನಡೆಸಿದರು. ಕುಮಾರಿ ಸನ್ನಿಧಿ ಎಂ. ಹದ್ಲಿ ವಚನ ಚಿಂತನ ಮಂಡಿಸಿದರು. ಮೃತ್ಯುಂಜಯ ಹಿರೇಮಠ ಹಾಗೂ ತಂಡದವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಬಂಜಾರ ಸಮುದಾಯದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಡಾ. ರಮೇಶ ಎಂ. ಕಲ್ಲನಗೌಡರ ನಿರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಸ್ವಾಗತಿಸಿದರು. ಉಪಾಧ್ಯಕ್ಷ ಡಾ. ಪ್ರಭು ಗಂಜಿಹಾಳ, ಶ್ರೀಮತಿ ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ದರಾಮ ಪಟ್ಟೇದ, ಸಹಕಾರ್ಯದರ್ಶಿ ಶ್ರೀಮತಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande