
ಗದಗ, 23 ಮೇ (ಹಿ.ಸ.) :
ಆ್ಯಂಕರ್ : ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರೀ ಬಿರುಗಾಳಿ ಮಳೆಯ ಅಬ್ಬರಕ್ಕೆ ಗದಗ ನಗರಸಭೆಯ 19ನೇ ವಾರ್ಡ್ ವ್ಯಾಪ್ತಿಯಲ್ಲಿರುವ ನಾಸೀರುದ್ದೀನ್ ಮುಲ್ಲಾ ಅವರ ಮನೆ ಮೇಲೆ ನೂರು ವರ್ಷಕ್ಕೂ ಅಧಿಕ ಹಳೆಯದಾದ ಬೃಹತ್ ಆಲದ ಹಾಗೂ ಬೇವಿನ ಮರ ಉರುಳಿ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ದುರಂತದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ವಾರ್ಡ್ ಸದಸ್ಯ ಮಹಾಂತೇಶ್ ನೆಲೋಡಿ ಅವರು, ನಗರಸಭೆ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ ತುರ್ತು ಪರಿಹಾರ ಕಾರ್ಯಕ್ಕೆ ಚಾಲನೆ ನೀಡಿದರು.
ಮರದ ಗಾತ್ರ ಅತಿದೊಡ್ಡದಾಗಿದ್ದರಿಂದ ಅದರ ಬುಡವನ್ನು ತೆರವುಗೊಳಿಸಲು ಜೆಸಿಬಿ ಯಂತ್ರಕ್ಕೂ ಸಾಧ್ಯವಾಗಲಿಲ್ಲ. ಇದರಿಂದ ಕ್ರೇನ್ ಯಂತ್ರದ ನೆರವು ಅಗತ್ಯವಾಗಿದ್ದು, ಸದ್ಯಕ್ಕೆ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿ ಸ್ಥಳವನ್ನು ಸುಗಮಗೊಳಿಸಲಾಗಿದೆ. ಉಳಿದಿರುವ ದೊಡ್ಡ ಬುಡವನ್ನು ಇನ್ನೆರಡು ದಿನಗಳಲ್ಲಿ ಕ್ರೇನ್ ಸಹಾಯದಿಂದ ತೆರವುಗೊಳಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸಂಕಷ್ಟದ ಸಮಯದಲ್ಲಿ ಕುಟುಂಬದ ಜೊತೆ ನಿಂತ ಮಹಾಂತೇಶ್ ನೆಲೋಡಿ ಅವರು, ಸಂತ್ರಸ್ತರ ತುರ್ತು ಅಗತ್ಯಗಳು ಹಾಗೂ ತೆರವು ಕಾರ್ಯದ ಕೆಲವು ವೆಚ್ಚಗಳನ್ನು ತಮ್ಮ ಸ್ವಂತ ಖರ್ಚಿನಿಂದಲೇ ಭರಿಸಿ ಮಾನವೀಯತೆ ಮೆರೆದಿದ್ದಾರೆ. ಅವರ ಈ ಕಾರ್ಯಕ್ಕೆ ವಾರ್ಡ್ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತ ನಾಸೀರುದ್ದೀನ್ ಮುಲ್ಲಾ ಹಾಗೂ ಕುಟುಂಬಸ್ಥರು, “ನಮ್ಮ ಮನೆ ಕುಸಿದು ಬದುಕು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿದ ಸದಸ್ಯ ಮಹಾಂತೇಶ್ ನೆಲೋಡಿ, ನಗರಸಭೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ನಾವು ಕೃತಜ್ಞರಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಮನೆ ಸಂಪೂರ್ಣ ಹಾನಿಗೊಳಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬವು ಜಿಲ್ಲೆಯ ಹಿರಿಯ ಸಚಿವ ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ ಹಾಗೂ ಯುವ ನಾಯಕ ಕೃಷ್ಣಗೌಡ್ರು ಪಾಟೀಲ ಅವರು ಭೇಟಿ ನೀಡಿ ನೆರವು ನೀಡುವ ನಿರೀಕ್ಷೆಯಲ್ಲಿದೆ.
“ಜನರ ಸಂಕಷ್ಟಕ್ಕೆ ಸ್ಪಂದಿಸುವವರೇ ನಿಜವಾದ ನಾಯಕರು” ಶಂಕರಸಾ ಅರಸಿದ್ದಿ
“ಪ್ರಕೃತಿ ವಿಕೋಪದಿಂದ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿದ 19ನೇ ವಾರ್ಡ್ ಸದಸ್ಯ ಮಹಾಂತೇಶ್ ನೆಲೋಡಿ ಅವರ ಕಾರ್ಯ ಶ್ಲಾಘನೀಯ. ತಮ್ಮ ಸ್ವಂತ ಖರ್ಚಿನಿಂದಲೇ ಸಂತ್ರಸ್ತರ ಅಗತ್ಯಗಳಿಗೆ ನೆರವಾದುದು ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಜಿಲ್ಲೆಯ ಹಿರಿಯ ನಾಯಕರು ಕೂಡ ಕುಟುಂಬಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಲಿ” ಎಂದು ಹಿರಿಯರಾದ ಶಂಕರಸಾ ಅರಸಿದ್ದಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP