
ಚಿತ್ರದುರ್ಗ, 23 ಮೇ (ಹಿ.ಸ.) :
ಆ್ಯಂಕರ್ : ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಸ್ವಯಂ ಉದ್ಯೋಗದ ಮೂಲಕ ಮಹಿಳೆಯರು ತಮ್ಮ ಬದುಕನ್ನು ಸಬಲಗೊಳಿಸಿಕೊಳ್ಳಬೇಕು ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಹೇಳಿದರು.
ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯ ಬಾಲಾಜಿ ಲೇಔಟ್ನ ಮದರ್ ತೆರೆಸಾ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಭೋವಿ ಜನಾಂಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಹಮ್ಮಿಕೊಂಡಿದ್ದ ಉಚಿತ ಟೈಲರಿಂಗ್ ತರಬೇತಿ ಹಾಗೂ ಹೊಲಿಗೆ ಯಂತ್ರೋಪಕರಣ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಗಮ ನೀಡುವ ತರಬೇತಿಯನ್ನು ಕೇವಲ ಫ್ಯಾಷನ್ ದೃಷ್ಟಿಯಿಂದ ನೋಡದೆ ಗಂಭೀರವಾಗಿ ಪರಿಗಣಿಸಬೇಕು. ಟೈಲರಿಂಗ್ ಕಸಬು ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಅಗತ್ಯವಾದ ಕೌಶಲ್ಯವಾಗಿದೆ ಎಂದು ಹೇಳಿದರು. ಗ್ರಾಮೀಣ ಭಾಗದಲ್ಲಿ ಒಂದು ಬ್ಲೌಸ್ ಹೊಲಿಗೆಗೆ ಕನಿಷ್ಠ 500 ರೂ. ದೊರೆಯುತ್ತಿದ್ದು, ಮಹಿಳೆಯರು ದಿನಕ್ಕೆ ಎರಡು ಬ್ಲೌಸ್ ಹೊಲಿದರೂ ತಿಂಗಳಿಗೆ 20ರಿಂದ 21 ಸಾವಿರ ರೂ.ವರೆಗೆ ಆದಾಯ ಗಳಿಸಬಹುದು ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಭೋವಿ ಅಭಿವೃದ್ಧಿ ನಿಗಮದ ಮೂಲಕ ಹಸು ಸಾಕಾಣಿಕೆ ಸಾಲ, ಒಂದು ಲಕ್ಷ ರೂ. ನೇರ ಸಾಲ, ಗಂಗಾ ಕಲ್ಯಾಣ ಯೋಜನೆ, ಸಾರಥಿ ವಾಹನ ಸಾಲ ಹಾಗೂ ಮಹಿಳಾ ಸಂಘಗಳಿಗೆ ಐದು ಲಕ್ಷ ರೂ.ವರೆಗೆ ಸಾಲ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿ ಹತ್ತು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದಶಮಾನೋತ್ಸವ ಆಚರಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈ ರೀತಿಯ ಉಚಿತ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.