
ಗದಗ, 23 ಮೇ (ಹಿ.ಸ.) :
ಆ್ಯಂಕರ್ : ಧರ್ಮ, ಸಮಾಜ ಮತ್ತು ವಿಚಾರಧಾರೆಗಳ ಕುರಿತು ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ಅವುಗಳನ್ನು ತಾತ್ವಿಕ ಹಾಗೂ ವೈಚಾರಿಕ ನೆಲೆಯಲ್ಲಿ ಚರ್ಚಿಸಬೇಕೇ ಹೊರತು ವೈಯಕ್ತಿಕ ಟೀಕೆ, ನಿಂದನೆ ಮತ್ತು ಚಾರಿತ್ರ್ಯ ಹರಣದ ಮೂಲಕ ವ್ಯಕ್ತಪಡಿಸುವುದು ಸರಿಯಾದ ಕ್ರಮವಲ್ಲ ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶ್ರೀಗಳು, ಕೆಲವು ದಿನಪತ್ರಿಕೆಯಲ್ಲಿ ರವಿ ಹಂಜ್ ಅವರು ಬರೆದಿರುವ “ಜಾತಿಗಳ ಅಸ್ಮಿತೆಗೆ ಐಕಾನುಗಳು ಅವಶ್ಯವೇ?” ಎಂಬ ಲೇಖನದಲ್ಲಿ ತಮ್ಮನ್ನೂ ಒಳಗೊಂಡಂತೆ ಹಲವರ ಕುರಿತು ವೈಯಕ್ತಿಕ ಟೀಕೆ ಮಾಡಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ದಿನಪತ್ರಿಕೆಗಳು ಸಮಾಜದ ಕನ್ನಡಿ” ಎಂಬ ಮಾತಿದೆ. ಸಮಾಜಕ್ಕೆ ದಿಕ್ಕು ತೋರಿಸುವ ಮತ್ತು ಜನಾಭಿಪ್ರಾಯ ರೂಪಿಸುವ ಜವಾಬ್ದಾರಿ ಪತ್ರಿಕೆಗಳ ಮೇಲಿದೆ. ಇಂತಹ ಸಂದರ್ಭದಲ್ಲಿ ವಿಚಾರ ಭಿನ್ನತೆಗಳಿದ್ದರೆ ಅವುಗಳನ್ನು ವೈಚಾರಿಕವಾಗಿ ಪ್ರತಿಪಾದಿಸಬೇಕು. ಆದರೆ ವೈಯಕ್ತಿಕ ಟೀಕೆ, ಆರೋಪ ಅಥವಾ ಅವಹೇಳನಕ್ಕೆ ಅವಕಾಶ ಕಲ್ಪಿಸುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.
ತಮ್ಮ ವಿರುದ್ಧ ಲೇಖನದಲ್ಲಿ ಉಲ್ಲೇಖಿಸಿರುವ ಕೆಲವು ವಿಚಾರಗಳಿಗೆ ಸ್ಪಷ್ಟನೆ ನೀಡಿರುವ ಶ್ರೀಗಳು, ದಿನಾಂಕ 20-01-2018ರಂದು ತಮ್ಮ ಪ್ರಕಾಶನ ಸಂಸ್ಥೆಯ ಕಾರ್ಯದರ್ಶಿ ಶಿವನಗೌಡ ಅವರು ಬಿಜ್ಜರಗಿ ಅವರಿಗೆ ಬರೆದ ಪತ್ರವನ್ನು ಆಧಾರವಾಗಿಸಿಕೊಂಡು ವೈಯಕ್ತಿಕ ಟೀಕೆ ಮಾಡಲಾಗಿದೆ. ಆದರೆ ಆ ಸಮಯದಲ್ಲಿ ತಾವು ತೋಂಟದಾರ್ಯ ಮಠಕ್ಕೆ ಬಂದಿರಲಿಲ್ಲ ಎಂಬ ವಾಸ್ತವವನ್ನು ಲೇಖಕರು ಗಮನಿಸಿಲ್ಲ ಎಂದು ತಿಳಿಸಿದ್ದಾರೆ.
ವಾಸ್ತವಿಕತೆ ಅರಿಯದೇ ಮನಸ್ಸಿಗೆ ಬಂದಂತೆ ಬರೆಯುವುದು ಸರಿಯಲ್ಲ. ಯಾವುದೇ ವಿಷಯದ ಹಿನ್ನೆಲೆ, ಸಂದರ್ಭ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಬರೆಯುವುದು ಅಗತ್ಯ. ಇದೇ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಬಸವರಾಜ ಶಾಸ್ತ್ರಿ ಅವರು, ತಾವು ತೋಂಟದಾರ್ಯಮಠದ ಅಧಿಕಾರ ವಹಿಸಿಕೊಳ್ಳಲು ಕಾರಣವಾದ ಹಿಂದಿನ ಶ್ರೀಗಳು ಬರೆದ ವುಯಿಲ್ ಕುರಿತು ಪ್ರಶ್ನೆ ಎತ್ತಿದ್ದಾರೆ. ಅವರಿಗೆ ಯಾವುದೇ ಸಂದೇಹವಿದ್ದರೆ ನೇರವಾಗಿ ಸಂಪರ್ಕಿಸಿ ದಾಖಲೆಗಳನ್ನು ಪರಿಶೀಲಿಸಬಹುದಾಗಿತ್ತು ಎಂದು ಶ್ರೀಗಳು ಹೇಳಿದ್ದಾರೆ.
ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಅಸಹನೆಯನ್ನು ವ್ಯಕ್ತಪಡಿಸಲು ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಸಮಾಜಮುಖಿ ವಿಚಾರಗಳನ್ನು ಮುಂದಿಡುವ ವೇದಿಕೆಗಳನ್ನು ವೈಯಕ್ತಿಕ ಭಾವನೆಗಳ ಅಭಿವ್ಯಕ್ತಿಗೆ ಬಳಸುವುದು ತಪ್ಪು ಸಂದೇಶ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೂ ತಮ್ಮ ಕುರಿತು ಮಾಡಲಾಗಿರುವ ಕೆಲವು ಆರೋಪಗಳನ್ನು ತಳ್ಳಿಹಾಕಿರುವ ಶ್ರೀಗಳು, “ರವಿ ಹಂಜ್ ಅವರು ಬರೆದಿರುವಂತೆ ನಾವು ಪಂಚಾಚಾರ್ಯರನ್ನಾಗಲಿ ಅಥವಾ ಇತರ ಯಾರನ್ನೇ ಆಗಲಿ ದ್ವೇಷಿಸಿಲ್ಲ. ಈ ರೀತಿಯ ಹೇಳಿಕೆಗಳು ವಾಸ್ತವಿಕತೆಗೆ ದೂರವಾಗಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಒಬ್ಬ ವ್ಯಕ್ತಿಯ ವಿಚಾರಗಳು ಅಥವಾ ನಿಲುವುಗಳ ಬಗ್ಗೆ ಚರ್ಚಿಸುವಾಗ ತತ್ತ್ವ ಮತ್ತು ಸಿದ್ಧಾಂತಗಳ ನೆಲೆಯಲ್ಲಿ ತಾರ್ಕಿಕವಾಗಿ, ದಾಖಲೆ ಹಾಗೂ ಆಧಾರಗಳೊಂದಿಗೆ ವಿಚಾರ ಮಂಡನೆ ಮಾಡಬೇಕು. ಚಾರಿತ್ರ್ಯ ಹರಣ, ಅಸಹನೆ ಅಥವಾ ವೈಯಕ್ತಿಕ ಆರೋಪಗಳ ಮೂಲಕ ವಿಚಾರ ಮಂಡಿಸುವುದು ಸಮಾಜಕ್ಕೆ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಮೂಲಕ ರವಿ ಹಂಜ್ ಹಾಗೂ ಬಸವರಾಜ ಶಾಸ್ತ್ರಿಗಳಿಗೆ ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ವಿಚಾರ ವಿನಿಮಯವು ಪರಸ್ಪರ ಗೌರವ ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ನಡೆಯಬೇಕು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP