
ಬೆಂಗಳೂರು, 23 ಮೇ (ಹಿ.ಸ.) :
ಆ್ಯಂಕರ್ : ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕುರಿತು ಕೇಂದ್ರ ಸರಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ದೇಶ ದೊಡ್ಡ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು,
“ರಾಹುಲ್ ಗಾಂಧಿ ಅವರು ಆರು ತಿಂಗಳ ಹಿಂದೆಯೇ ದೇಶ ಆರ್ಥಿಕ ಸಮಸ್ಯೆಗೆ ಸಿಲುಕಲಿದೆ ಎಂದು ಎಚ್ಚರಿಸಿದ್ದರು. ಅನಗತ್ಯ ಯುದ್ಧ ಪರಿಸ್ಥಿತಿಯಿಂದ ಇಂದಿನ ಸಮಸ್ಯೆ ಉಂಟಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು,” ಎಂದು ಹೇಳಿದರು.
ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 120 ಡಾಲರ್ ತಲುಪಿದ್ದರೂ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಅವರು ನೆನಪಿಸಿದರು.
ಈಗ ತೈಲದರ ಕಡಿಮೆ ಇದ್ದ ಸಮಯದಲ್ಲೂ ಕೇಂದ್ರ ಸರ್ಕಾರ ಬೆಲೆ ಇಳಿಸದೇ ಲಾಭ ಮಾಡಿಕೊಂಡಿದ್ದು, ಯುದ್ಧದ ಕಾರಣದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದ ಬಳಿಕವೂ ತೆರಿಗೆ ಕಡಿತ ಮಾಡದೇ ಜನರ ಮೇಲೆ ಹೊರೆ ಹಾಕುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆ ಗೆಲ್ಲುವುದೇ ಮುಖ್ಯವಾಗಿದ್ದು, ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.
ನೀಟ್ ಪರೀಕ್ಷೆ ರಾಜ್ಯ ಮಟ್ಟದಲ್ಲೂ ನಡೆಸಲು ಸಿದ್ಧ:
ನೀಟ್ ಪರೀಕ್ಷೆ ಕುರಿತು ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಅನುಮತಿ ನೀಡಿದರೆ ರಾಜ್ಯ ಮಟ್ಟದಲ್ಲೇ ಪರೀಕ್ಷೆ ನಡೆಸಲು ಕರ್ನಾಟಕ ಸಿದ್ಧವಿದೆ ಎಂದು ಹೇಳಿದರು.
ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ಒಂದಲ್ಲೊಂದು ಎಡವಟ್ಟು ನಡೆಯುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದ ಅವರು, ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಮಾದರಿಯಲ್ಲೇ ನೀಟ್ ಪರೀಕ್ಷೆಯನ್ನೂ ಸಮರ್ಪಕವಾಗಿ ನಡೆಸಲು ರಾಜ್ಯ ಸಿದ್ಧವಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.